MOTIVATIONAL REAL N REEL

ಬೆಂಬಿಡದೆ ಕಾಡುವ ಭೂತ

ಇತ್ತೀಚಿಗೆ ಬೆಂಬಿಡದೆ ದೊಡ್ಡವರು ಸಣ್ಣವರು ಹಸುಗೂಸುಗಳನ್ನ ಕಾಡುವ ಭೂತ ಎಂದರೆ ಈ ಸೋಶಿಯಲ್ ಮೀಡಿಯಾ.

ಹೌದು ನಾನೂ ಅದೇ ಸೋಶಿಯಲ್ ಮೀಡಿಯಾದಲ್ಲಿದ್ದೇನೆ. ಅಲ್ಲಿಂದಲೇ ಇದನ್ನ ಬರೆಯುತಿದ್ದೇನೆ. ಸೋಶಿಯಲ್ ಮೀಡಿಯಾ ಒಳ್ಳೆಯದಾ ಕೆಟ್ಟದಾಎಂದು ಕೇಳಿದರೆ ಒಳ್ಳೇದು ಅಥವಾ ಕೆಟ್ಟದ್ದು ಎಂದು ಡಿಕ್ಲೇರ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ.  ಆದರೆ ನಾವು ಅದನ್ನ ಬಳಸುವ ರೀತಿ ಹಾಗು ಉದ್ದೇಶ ಒಳ್ಳೆಯದಾಗಿದ್ದರೆ ಅದರಿಂದ ಖಂಡಿತ ಎಲ್ಲರಿಗು ಒಳ್ಳೆಯದು.

ಆದರೆ ಬಹಳಷ್ಟು ಒಳ್ಳೆಯ ವಿಚಾರಗಳ ಮಧ್ಯೆ ಮನುಷ್ಯನ ಮನುಷತ್ವ ಕಾಣೆಯಾಗಿದೆ ಎನ್ನುವುದೇ ನೋವಿನ ಸಂಗತಿ. ನಾವು ಎತ್ತ ಕಡೆ ಸಾಗುತಿದ್ದೇವೆ ಎನ್ನುವುದು ಒಂದು ದೊಡ್ಡ ಯಕ್ಷ ಪ್ರಶ್ನೆ.

ಒಂದು ಕಾಲವಿತ್ತು ಮನೆಯಲ್ಲಿರುವ ನಮ್ಮ ಹೆತ್ತವರ ಉಸಿರು ನಿಂತಾಗ ಅವರ ಮಕ್ಕಳು ತುಂಬಾ ಹತ್ತಿರದವರು ಶೋಕಾಚರೆಣೆಯಲ್ಲಿ ತೊಡಗುತ್ತಿದ್ದರು. ಶೋಕದ ಮನೆಯಲ್ಲಿ ಓಲೆ ಉರಿಸುವುದಾಗಲಿ ಯಾವುದೇ ರೀತಿಯ ಅಡುಗೆ ಮಾಡುವುದಾಗಲಿ ನಿಷೇದಿಸಲಾಗಿತ್ತು. ಅಕ್ಕ ಪಕ್ಕದವರು ಆಡುಗೆ ಮಾಡಿ ತಂದು ಕೊಡುವುದು ವಾಡಿಕೆಯಾಗಿತ್ತು. ತನ್ನ ಗಂಡನ ಕೆಳೆದುಕೊಂಡ ಹೆಂಡತಿ ಒಂದು ಅಥವಾ ಎರಡು ತಿಂಗಳು ಕಣ್ಣಿಗೆ ಕಾಣುತ್ತಿರಲಿಲ್ಲ.

ಆಗಿನ ಕಾಲದಲ್ಲಿ ಕೈಯಲ್ಲಿ ಮೊಬೈಲ್ ಫೋನ್ ಇಲ್ಲದ್ದಿದರೂ ಮನೆಯಲ್ಲಿ ಲ್ಯಾಂಡ್ಲೈನ್ ಗೆ ಯಾವುದೇ ಕರೆ ಬಂದರೂ ಅದನ್ನ ಉತ್ತರಿಸುವುದಾಗಲಿ,  ಸತ್ತೋಗಿರುವ ವ್ಯಕ್ತಿಯನ್ನು ಹೂಳಲು ಅಥವಾ ಸುಡಲು ಎಲ್ಲಾ ಕೆಲಸಗಳನ್ನಅಕ್ಕ ಪಕ್ಕದವರು, ನೆಂಟರಿಷ್ಟರು ವ್ಯವಸ್ಥೆ ಮಾಡುತ್ತಿದ್ದರು.

ಕಾರಣ ಇಷ್ಟೇ. ಮನೆಯವರು ಅತೀವ ನೋವಲ್ಲಿದ್ದಾಗ ಅವರಿಂದ ಈ ಕೆಲಸಗಳು ಸಾಧ್ಯವಾಗದು ಎನ್ನುವ ಅನುಕಂಪವಿತ್ತು. ಪುತ್ರಶೋಕಂ ನಿರಂತರಂ ಅನ್ನೋ ಗಾದೆಯೊಂದಿತ್ತು. ಆದರೆ ಈಗ ಗಾದೆ ಸುಳ್ಳಾಗುತಿದೆ ಎನ್ನೋದು ಎದ್ದು ಕಾಣುತ್ತಿದೆ.

ಹಾಗಂತ  ಸಾವಿನ ಮನೆಯವರು ರಾತ್ರಿ ಹಗಲು ಅಳಬೇಕು ಅನ್ನೋದು ನನ್ನ ವಾದವಲ್ಲ. ನನಗೆ ಆಶ್ಚರ್ಯ ಅಥವಾ ನೋವು ಅನಿಸುವುದು ಇನ್ನೂ ತಂದೆ ತಾಯಿ ಅಥವಾ ಅಣ್ಣ ತಮ್ಮ ಸತ್ತು 30 ನಿಮಿಷ ದಾಟಿರುವುದಿಲ್ಲ ಅಷ್ಟರಲ್ಲೇ ಸೋಶಿಯಲ್ ಮೀಡಿಯಾ ದಲ್ಲಿ ಮಗನೇ ತನ್ನ ತಂದೆಯ ಸಾವಿನ ಪೋಸ್ಟ್ ಒಂದನ್ನು ಏನೋ ಸಾಧನೆಯಂತೆ ತಗಲಾಕಿರುತ್ತಾನೆ.

“ರಿಪ್ ಡ್ಯಾಡ್” ಅಂತ ಒಂದು ಒಕ್ಕಣೆ ಕೂಡ ಅಲ್ಲಿರುತ್ತೆ.

ಬಹಳಷ್ಟು ಜನ ಇಂತಹ ಪೋಸ್ಟ್ಗಳನ್ನು ಹಾಕೋವಾಗ ಜನರ ಕಾಮೆಂಟ್ಸ್ ಗಿಟ್ಟಿಸಲು ಅಥವಾ ಇಂಪ್ರೆಷನ್ ಗಿಟ್ಟಿಸಲೇ ಹಾಕೋದು. ಬೇರೇನೂ ಸಿಗೋದೇ ಇಲ್ಲ ಇವರಿಗೆ.

ಕೆಲವರ ಪೋಸ್ಟ್ನಲ್ಲಿ ಯಾವತ್ತು?, ಎಷ್ಟೋತ್ತಿಗೆ ಶವ ಸಂಸ್ಕಾರ ? ಎಂಬ ವೇಳಾಪಟ್ಟಿ ಕೂಡ ಹಾಕಲಾಗಿರುತ್ತೆ. ಬಹುಶ ಅಷ್ಟು ಕಡಿಮೆ ಸಮಯದಲ್ಲಿ ಬಹಳಷ್ಟು ಜನ ಸಮೂಹ ಬಂದು ಸೇರಲಿ ನಾವೆಷ್ಟು ಪಾಪ್ಯುಲರ್ ಎಂದು ಸ್ಪರ್ಧೆಯ ಗೀಳು ಇರಬಹುದೇನೋ.

ಒಬ್ಬ ವ್ಯಕ್ತಿಯ ಸಾವಿನ ಸಂಗತಿ ನಾಲ್ಕು ಜನರಿಗೆ ತಿಳಿಯಲಿ ಎಂದು  ಹಾಕುವುದು ತಪ್ಪು ಎನ್ನುತ್ತಿಲ್ಲ. ಅದನ್ನು ನಿಮ್ಮ ಮೊಬೈಲ್ನಲ್ಲೇ ಕ್ಲಿಕ್ಕಿಸಿ ನೀವೆ ಪೋಸ್ಟ್ ಮಾಡುವಷ್ಟು ತಾಕತ್ತು ಸಹನೆ ಸಂಯಮ ಅಥವಾ ಹೃದಯ ನಿಮ್ಮಲ್ಲಿ ಅಂತಹ ಸಂದರ್ಭದಲ್ಲಿ ಬರುವುದಾದರೆ ಆ ನಿಮ್ಮ ಆತ್ಮೀಯ ವ್ಯಕ್ತಿಯನ್ನು ಕಳೆದುಕೊಂಡ ನೋವು ಸಂಕಟ ದುಃಖ ನಿಮಗಾಗುತಿಲ್ಲವೇ ಅನ್ನೋದು ನನ್ನ ವಯಕ್ತಿಕ ಭಾವನೆ ಅಷ್ಟೇ.

ಇನ್ನು ಕೆಲವರಿಗೆ ಸೆಲ್ಫಿ ಗೀಳು. ಅವರು ಒಂದು ಹೆಜ್ಜೆ ಮುಂದೇನೆ ತಮ್ಮವರು ಸತ್ತಾಗ ಆ ಸತ್ತ ವ್ಯಕ್ತಿಯ ಮೃತ ದೇಹದ ಎದುರೇ ಸೆಲ್ಫಿ ಕ್ಲಿಕ್. ನನಗೆ ಇಲ್ಲಿ ದೇಹವನ್ನು ಹೆಣ ಎಂದು ಬರೆಯಲು ಕಷ್ಟವೆನಿಸುತಿದೆ. ಸೆಲ್ಫಿ ಎಷ್ಟು ಕೆಟ್ಟದು ಎಂದರೆ, ಹೆಣದ ಎದುರು ಸೆಲ್ಫಿ ಕ್ಲಿಕ್ಕಿಸುವುದು ಬಿಡಿ, ಕೆಲವೊಂದಿಷ್ಟು ಜಾಗಗಳಿಗೆ ಹೋಗಿ ಸೆಲ್ಫಿ ಕ್ಲಿಕ್ಕಿಸಿ ತಾವೇ ಹೆಣವಾಗಿದ್ದು ಉಂಟು.

ಇನ್ನು ಕೆಲವರು ಇಂತಹ ಫೋಟೋಸ್ ಗಳನ್ನ ಸ್ಟೇಟಸ್ ನಲ್ಲಿ ಹಾಕಿ ತೋರಿಸುವುದು ಇನ್ನೊಂದು ಗೀಳು. ತಮ್ಮ ಮನೆಯಲ್ಲಿ ಇಲಿ ಸತ್ತು ಬಿದ್ದರೂ ಅದು ಅವರ ಸ್ಟೇಟಸ್ ನಲ್ಲಿ ಲೋಡ್ ಆಗಿರುತ್ತೆ.

ಇವೆಲ್ಲ ದುಃಖದ ವಿಚಾರಗಳಾದರೆ, ಇನ್ನು ಕೆಲವರಿಗೆ ಮದುವೆ ಫೋಟೋಸ್ಗಳನ್ನು ಹಾಕೋ ಹುಚ್ಚು, ಇರಲಿ ಮದುವೆ ಫೋಟೋಸ್ ಲೋಡ್ ಮಾಡಿ ಕಾಂಪ್ಲಿಮೆಂಟ್ಸ್ ಗಿಟ್ಟಿಸುವುದಕ್ಕೆ ನನ್ನ ಸಹಮತವಿದೆ, ಆ ಫೋಟೋಸ್ ಗಳನ್ನೂ ನೋಡೋದು ಅಂದ್ರೆ ನನಗೂ ಇಷ್ಟನೇ.

ಈ ಮದುವೆಯ ಫೋಟೋಸ್ಗಳನ್ನು ನೋಡಿದಾಗ ಯಾರಿಗಾದರೂ ಕೋಪ ಬರುತ್ತೆ ಅಂದ್ರೆ ಅದು ಕೇವಲ ಮದುಮಗನ ತಾಯಿಗೆ.  ಮನೆಯಲ್ಲಿ ಒಂದು ಗ್ಯಾಸ್ ಸಿಲಿಂಡರ್ ಎತ್ತಲು ಒದ್ದಾಡುತಿದ್ದ ಮಗ ಮದುವೆಯ ಫೋಟೋಸ್ನಲ್ಲಿ ಬರೋಬ್ಬರಿ 50 ಕೆಜಿ ತೂಕವಿರುವ ತನ್ನ ಹೆಂಡತಿಯನ್ನು ಎತ್ತಿಕೊಂಡು ತನ್ನ ದೇಹದಾಢ್ಯತೆ ಪ್ರದರ್ಶಿಸುವಾಗ ತಾಯಿಯ ಕೋಪ ಸಹಜ ಅಲ್ವೇ. ?

ಮದುವೆಗಿಂತ ಸ್ವಲ್ಪ ಮುಂದೆ ಹೋದರೆ ಇನ್ನು ಕೆಲವು ಬುದ್ದಿವಂತರು ಪ್ರಸ್ತದ ಅಂದರೆ ಮೊದಲ ರಾತ್ರಿಯ ಸ್ಟೇಟ್ಸ್ಗಳನ್ನು ಉತ್ಸುಕತೆಯಿಂದ ಹಾಕಿರ್ತಾರೆ. ಅವರ ಮೂಲ ಭಾಷೆ ಯಾವುದೊ ಗೊತ್ತಾಗುವುದಿಲ್ಲ . ಆದರೆ ಅವರ ಆಂಗ್ಲ ಭಾಷೆಯ ರೂಪಾಂತರವಂತೂ ಬಲು ಅದ್ಭುತ.”my brothers wife’s & my first night”. ಯಪ್ಪಾ ಆಂಗ್ಲ ಭಾಷೆಯ ಜೊತೆಗೆ ಅವನ ಅತ್ತಿಗೆಯ ಕೊಲೆ ಕೂಡ ಸಾವಿರಾರು ಜನರ ಎದುರು ಮಾಡಿರ್ತಾನೆ. ಇಂತಹ ಮೆಸ್ಸೇಜ್ ಅಥವಾ ಭಾಷೆಯ ಬಳಕೆ ನಮ್ಮ ಕನ್ನಡಿಗರಲ್ಲಿ ಇಲ್ಲ ಬಿಡಿ. ನಮ್ಮ ಕನ್ನಡಿಗರಲ್ಲಿ ಸಭ್ಯತೆ ಜಾಸ್ತಿ.

ಇನ್ನು ಕೆಲವರ ಗೀಳು ನಾನು ಗಮನಿಸಿದ್ದು, ಈ ಅತ್ಯಂತ ಕಷ್ಟಕರ ದಿನಗಳಾದ ಕೊರೋನ ಕಾಲದಲ್ಲಿ,  ಆ ಸಂದರ್ಭದಲ್ಲಿ ಬಹಳಷ್ಟು ಜನ ಹೋಟೆಲ್ಗಳನ್ನ ಮುಚ್ಚಿಕೊಂಡಾಗ ಅಲ್ಲಿ ಇಲ್ಲಿ ಸಿಲುಕಿಕೊಂಡ ಬ್ಯಾಚುಲರ್ ಗಳು, ಪ್ರಯಾಣಿಕರು ಲಾಡ್ಜ್ಗಳಲ್ಲಿ ಸಿಲುಕಿಕೊಂಡವರು. ಇನ್ನು ಹೆಚ್ಚು ಹೇಳಬೇಕೆಂದರೆ ಭಿಕ್ಷುಕರ ಹಾಗು ಬೀದಿನಾಯಿಗಳ ಪಾಡು ದೇವರಿಗೆ ಪ್ರೀತಿ.

ಈ ಮಧ್ಯದಲ್ಲಿ ಕೆಲವರು, ವಾಟ್ಸಪ್ಪ್ ಗ್ರೂಪ್ ಗಳನ್ನುಕಟ್ಟಿಕೊಂಡು ಗ್ರೂಪ್ಗಳಲ್ಲಿ ಯಾವಾಗಲು ಮಿಂಚುತ್ತಾ ಇರಬೇಕು ಅನ್ನೋ ಗೀಳು ಕಟ್ಕೊಂಡು ಇರ್ತಾರೆ ಅಲ್ವಅವರ ಕಥೆ. ಮಾಡ್ಲಿಕ್ಕೆ ಕೆಲಸ ಇರ್ಲಿಲ್ಲ ಫೋಟೋ ಶೂಟ್ ಮಾಡಕ್ಕೆ ಎಲ್ಲೂ ಹೋಗೋ ಹಾಗಿಲ್ಲ ಏನ್ ಮಾಡ್ತೀರಾ ಇರೋ ಬರೋ ಭಕ್ಷ್ಯ ಭೋಜನ ಬಿರಿಯಾನಿ, ತಿಂಡಿ ಇವುಗಳನ್ನ ಮಾಡೋದು ಪೋಸ್ಟ್ ಹಾಕೋದು. ಆ ಕೊರೊನ ಕಾಲದಲ್ಲಿ ಟಿವಿ ನೋಡ್ತಿದ್ರೋ ಇಲ್ವೋ ಗೊತ್ತಿಲ್ಲ. ನೋಡಿದ್ದರೆ ಕೆಲವು ಭಿಕ್ಷುಕರು ಒಂದು ಹೊತ್ತು ಹಳಿಸಿದ ಗಂಜಿಗೆ ಪಟ್ಟ ಪಾಡು,  ಒಣಗಿ ಕಲ್ಲಾದ ಚಪಾತಿಯನ್ನು ನೀರಿನಲ್ಲಿ ತೊಳೆದು ನೀರಿನಲ್ಲೇ ಅದ್ದಿ ತಿಂದ ದೃಶ್ಯ ಇನ್ನೂ ನನ್ನ ಕಣ್ಣ ಮುಂದಿದೆ.

ಇನ್ನು ಕೆಲವು ಪೋಷಕರ ಸ್ಟೇಟಸ್ ಗಳು ತಮ್ಮ ಮಕ್ಕಳು ಒಳ್ಳೆ ಅಂಕ ಪಡೆದಾಗ ಅಂಕಗಳೊಂದಿಗೆ ಸ್ಟೇಟಸ್ ಹಾಕ್ಲಿ ಪರವಾಗಿಲ್ಲ ಅದರಲ್ಲಿ ನಿಮ್ಮ ಮತ್ತು ನಿಮ್ಮ ಮಕ್ಕಳ ಶ್ರಮವಿದೆ. ಅದು ಬೇರೆಯವರಿಗೆ ಪ್ರೇರಣೆಯಾಗಬಹುದು ಇಲ್ಲ ಸ್ಪರ್ಧಾತ್ಮಕವು ಆಗಬಹುದು. ಆದರೆ ಈ ಶಾಲೆಗಳಲ್ಲಿ ನಡೆಸುವ ಕೆಲವು ಚಟುವಟಿಕೆಗಳಲ್ಲಿ ಕೆಲವು ಮಕ್ಕಳಿಗೆ ಅಷ್ಟೇ ಅವಕಾಶ ದೊರೆಯುವುದು ಎಲ್ಲರಿಗು ದೊರಯುವುದು ಅಸಾಧ್ಯ. ಇತ್ತೀಚಿಗೆ ನನ್ನ ಮಕ್ಕಳ ಶಾಲೆಯ ಕಥೆ.

ನನ್ನ ಸಹ ಪೋಷಕರ ಮಗುವೊಂದು ಲೀಡರ್ ಶಿಪ್ ಬ್ಯಾಡ್ಜ್ ಹಾಕಿ ಕೊಳ್ಳುತ್ತೆ. ಅದು ನನಗೆ ಗೊತ್ತು ಹಾಗು ನನ್ನ ಕಣ್ಣಿಗೆ ಎದ್ದು ಕಾಣುತ್ತದೆ.  ಒಂದೆರಡು ಸಲ ಕಂಗ್ರಾಟ್ಸ್ ಅಂತ ಆ ತಾಯಿ ಮಗುವನ್ನ ಅಭಿನಂದಿಸಿದ್ದು ಉಂಟು. ಅದು ಒಳ್ಳೆಯ ಎಥಿಕ್ಸ್ ಕೂಡ. ಆದರೆ ಈ ಮಹಾತಾಯಿಗೆ ಮಗುವಿನ ಲೀಡರ್ ಶಿಪ್ ನ ಹೊಳೆಯುವ ಬ್ಯಾಡ್ಜ್ ನ ಗೀಳು. ಎಷ್ಟು ಮಾತನಾಡಿದರೂ ಕಡಿಮೇನೆ.

ಹಾಗಂತ ನೇರವಾಗಿ ನನ್ನ ಮಗಳು ಲೀಡರ್ ಅಂತನೂ ಹೇಳಲ್ಲ ಅದನ್ನ ಹೇಳೋದಕ್ಕೆ ಒಂದು ಬೇರೆ ಟೆಕ್ನಿಕ್ ಇದೆ. ನನ್ನ ನೋಡಿದ ತಕ್ಷಣ ಅವರ ಬಾಯಿಂದ ಬರುವ ಮಾತೆಂದರೆ “ಅಯ್ಯೋ ಇವತ್ತು ನನ್ನ ಮಗಳು ಸ್ಕೂಲ್ಗೆ ಬರುವಾಗ ತಡವಾಯಿತು”.

ಏಕೆ ಎಂದು ನಾನು ಕೇಳದಿದ್ದರೂ ಅವರೇ “ಅವಳ ಲೀಡರ್ ಶಿಪ್  ಬ್ಯಾಡ್ಜ್  ಸಿಗಲೇ ಇಲ್ಲ ಹುಡುಕಿ ಹುಡುಕಿ ಕೊನೆಗೂ ಸಿಕ್ತು”.  ಇದು ಒಂದು ದಿನದ ಮಾತು ಕಥೆಯಾದರೆ ಮರುದಿನ ಸ್ವಲ್ಪ ಚೇಂಜ್  “ಇಂದು ನನ್ನ ಮಗಳ ಲೀಡರ್ ಶಿಪ್ ಬ್ಯಾಡ್ಜ್ ಕಳೆದು ಹೋಯಿತು ಮತ್ತೆ ತೆಗೆದು ಕೊಳ್ಳಲು ಫೈನ್ ಕಟ್ಟಬೇಕಾಯಿತು”. ಇನ್ನು ಮಗದೊಂದು ದಿನ ಇನ್ನೊಂದು ವಿಚಾರ ಅದೇನೆಂದರೆ ” ನನ್ನ ಮಗಳಿಗೆ ಮುಂದಿನ ವರ್ಷ ಲೀಡರ್ ಆಗಬೇಡ ಎಂದು ಕಡಾ ಖಂಡಿತ ವಾಗಿ ಹೇಳಿದ್ದೀನಿ”.  “ಒಂದು ದಿನ ಸ್ವಲ್ಪ ತಡವಾದರೂ ಟೀಚರ್ “ನೀನು ಲೀಡರ್”. “ನೀನೆ ಲೇಟಾಗಿ ಬಂದರೆ ಹೇಗೆ ಎಂದು ಹೊಗಳುತ್ತಾರೆ …. ಅಲ್ಲ …..ಅಲ್ಲ ಬೈತಾರೆ “.  ಇದನ್ನ ಹೇಳುತ್ತಾ ಹೋದರೆ ಬಹಳಷ್ಟು ಇದೆ ಆದರೆ ಅದೆಲ್ಲನೂ ಬರೆಯುವ ಅಗತ್ಯವಿಲ್ಲ ಯಾಕೆಂದರೆ ಎಷ್ಟು ಹೇಳಿದರೂ ಸುತ್ತಿ ಬಳಸಿ ಬರೋದು ಅದೇ ಲೀಡರ್ ಮತ್ತು ಲೀಡರ್  ಬ್ಯಾಡ್ಜ್.  ಅಷ್ಟೇ ಒಟ್ಟಾರೆಯಾಗಿ ಹೇಳುವುದಾದರೆ ಅದೇ ಗೀಳು ತಮ್ಮನ್ನ ತಾವು ಇತರರಿಗಿಂತ ಉತ್ತಮರು ಎಂದು ತೋರ್ಪಡಿಸುವ ಗೀಳು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X