ಗುರಿ ತಲುಪುವ ರಹಸ್ಯ
ನೀವು ಅಂದುಕೊಂಡಂತೆ ಗುರಿಯನ್ನು ತಲುಪಲು ಈ ರಹಸ್ಯ ವಿಚಾರಗಳನ್ನು ಗಾಢವಾಗಿ ಓದಿ. ಪುನಃ ಪುನಃ ಮನನ ಮಾಡಿ ಅನುಷ್ಠಾನಕ್ಕೆ ತಂದುಕೊಂಡರೆ ಯಶಸ್ಸು ಕೈಯಲ್ಲಿರುವ ನೆಲ್ಲಿಕಾಯಿಯಂತೆ ನಿಮ್ಮ ಅಧೀನವಾಗುತ್ತದೆ.
ಕಾಲವೆಂಬ ಕುದುರೆಯಲ್ಲಿ ಧಾವಿಸುತ್ತಾ ವಿವೇಕವೆಂಬ ಖಡ್ಗ ಹಿಡಿದು ಏಕಾಗ್ರ ಮನಸ್ಸಿನಿಂದ ಗುರಿ ತಲುಪಲು ಧಾವಿಸಿರಿ. ಗುರಿ ತಲುಪಲು ಹೊರಟಿರುವ ನಿಮಗೆ ಪ್ರಾರಂಭದಲ್ಲಿ ಎದುರಾಗುವ ಸಣ್ಣ ಪುಟ್ಟ ಸಮಸ್ಯೆಗಳೇ ಮುಂದೆ ಪರ್ವತದಂತೆ ಬೆಳೆದುಕೊಳ್ಳುತ್ತವೆ. ಆ ಸಮಸ್ಯೆಗಳನ್ನು ಪ್ರಾರಂಭದಲ್ಲಿಯೇ ಹೊಸಕಿ ಹಾಕಿರಿ. ನಿಮ್ಮ ಯಶಸ್ಸು ಅಡಗಿರುವುದು ಸಾವಿರ ಸಾವಿರ ಕ್ಷುದ್ರೋಪದ್ರವಗಳ ಗರ್ಭದಲ್ಲಿ ಎಂಬ ಅರಿವಿರಲಿ. ನೀವು ಸಾಧಿಸಬೇಕಾದ ಕಾರ್ಯದ ಬಗ್ಗೆ ಪೂರ್ಣ ಮನಸ್ಸು ದೇಹ ಮಾಂಸ ಖಂಡಗಳ ನರ ನಾಡಿಗಳು ನಿರಂತರ ಚಿಂತನೆ ಮಾಡುತ್ತಲೇ ಇರಬೇಕು. ಆ ಕಾರ್ಯವನ್ನು ಸಾಧಿಸಿದರೆ ಮಾತ್ರ ನೀವು ಮಹಾತ್ಮರಾಗಲು ಸಾಧ್ಯ. ಬೇರೆ ದಾರಿ ನಿಮಗೆ ಇರುವುದೇ ಇಲ್ಲ.
ಯಾವ ಕ್ಷಣದಲ್ಲಿಯೂ ಉತ್ಸಾಹ ಮತ್ತು ಸಂತೋಷಗಳನ್ನು ಕಳೆದುಕೊಳ್ಳುತ್ತದೆ. ಧೈರ್ಯದಿಂದ ಮುನ್ನಡೆಯುತ್ತಾ ಸಾಗುತ್ತಲೇ ಇರಿ. ಗುರಿಮುಟ್ಟಲು ಸಾಗುತ್ತಿರುವ ನಿಮ್ಮಲ್ಲಿ ಪ್ರತಿಯೊಂದು ಕ್ಷಣವೂ ಆತ್ಮ ವಿಶ್ವಾಸ ಅಪರಮಟ್ಟದಲ್ಲಿ ವೃದ್ಧಿಯಾಗುತ್ತದೆ. ಸ್ವಂತಿಕೆ ಬೆಳೆಯುತ್ತದೆ. ಅಷ್ಟೇ ಅಲ್ಲದೆ ಇತರರಿಗೂ ಉತ್ತಮ ಮಾರ್ಗದರ್ಶನ ಉಪಕಾರ ಮಾಡುವ ಅಪೂರ್ವ ಅವಕಾಶಗಳು ನಿಮ್ಮ ಪಾಲಿಗೆ ಬಂದೊದಗುತ್ತವೆ.
ನಿಮ್ಮ ಗುರಿ ಕೇವಲ ಒಣ ಪ್ರತಿಷ್ಠೆ, ಸ್ವಾರ್ಥ, ಕೀರ್ತಿ, ಹಣ, ಹೆಂಡತಿ, ಮಕ್ಕಳು, ಮನೆ ಇವು ಗಳ ಸಂಪಾದನೆಯಲ್ಲಿ ಮಾತ್ರ ಸೀಮಿತವಲ್ಲ ತಾನೇ?. ದೇವರು ಕೂಡ ಮೆಚ್ಚಿ ನಿಮ್ಮ ಬೆನ್ನು ತಟ್ಟಬೇಕು. ನಿಮ್ಮ ಬಂದು ಬಳಗದವರು ನಿಮ್ಮ ಹೆಸರನ್ನು ಹೇಳಿಕೊಳ್ಳಲು ಸಂತೋಷ ಪಡಬೇಕು. ನೂರಾರು ಸಾವಿರಾರು ಜನರು ನಿಮ್ಮ ಉಪಕಾರವನ್ನು ಸ್ಮರಿಸಿಕೊಂಡು ಆನಂದಬಾಷ್ಪವನ್ನು ಸುರಿಸಬೇಕು. ಇಂತಹ ಶ್ರೇಷ್ಠ ಗುರಿ ಉದ್ದೇಶಗಳು ನಿಮ್ಮದಾಗಿದೆಯಲ್ಲವೇ. ನಿಮಗೆ ಜಯವಾಗಲಿ.
Leave feedback about this