ಹೆಂಗಸರಿಗೆ ಗಡ್ಡ ಏಕೆ ಬರುವುದಿಲ್ಲ?
ಪುಟ್ಟ ಬಾಲಕನ ಮೈ ಮೇಲೆ ನಯವಾದ ಮೆದು ಕೂದಲಿರುತ್ತದೆ. ದೊಡ್ಡವನಾದ ಮೇಲೆ ಕೂದಲು ಬಿರು ಸಾಗುತ್ತದೆ. ಹುಡುಗ ಹುಡುಗಿಯರು 11 ರಿಂದ 13ನೇ ವಯಸ್ಸಿನಲ್ಲಿ ಪ್ರಾಯಕ್ಕೆ ಬರುತ್ತಾರೆ. ಈ ವಯಸ್ಸಿನಲ್ಲಿ ಎಂಡೋಕ್ರೈನ್ ಗ್ಲ್ಯಾಂಡ್ಸ್ ಅಂದರೆ ನಿರ್ನಾಳ ಗ್ರಂಥಿಗಳು ಶೀಘ್ರವಾಗಿ ಬೆಳೆಯುತ್ತವೆ. ಪುರುಷನಲ್ಲಿ ವೃಷಣಗಳು ಹಾಗೂ ಇತರ ರಸ ಗ್ರಂಥಿಗಳು ಆಂಡ್ರೋಜನ್ ಎಂಬ ಲೈಂಗಿಕ ಹಾರ್ಮೋನ್ ಉತ್ಪತ್ತಿ ಮಾಡುತ್ತವೆ.
ಹೆಂಗಸರಲ್ಲಿ ಅಂಡಾಶಯ ಅಥವಾ ಇತರ ಲೈಂಗಿಕ ಗ್ರಂಥಿಗಳು ಈಸ್ಟ್ರೋಜನ್ ಎಂಬ ಮತ್ತೊಂದು ಗುಂಪಿನ ಹಾರ್ಮೋನ್ ಉತ್ಪತ್ತಿ ಮಾಡುತ್ತವೆ. ಆಂಡ್ರೋಜನ್ ಗಂಡಸಿಗೆ ಗಡ್ಡ ಮೀಸೆ ಮತ್ತು ಎದೆಯ ಮೇಲೆ ಕೂದಲು ಬೆಳೆಯುವ ಹಾಗೆ ಮಾಡುತ್ತವೆ. ಪ್ರಾಯಕ್ಕೆ ಬಂದಾಗ ಧ್ವನಿ ಒಡೆಯುವುದಕ್ಕೂ ಇದೇ ಕಾರಣ.
ಈಸ್ಟ್ರೋಜನ್ ಹೆಂಗಸರ ದೈಹಿಕ ಬದಲಾವಣೆಗಳನ್ನು ಉಂಟುಮಾಡುತ್ತವೆ. ತಿಂಗಳಿಗೊಮ್ಮೆ ಋತುಮತಿ ಆಗುತ್ತಾಳೆ. ಇದೇ ಹಾರ್ಮೋನ್ ಮಹಿಳೆಯರಲ್ಲಿ ಗಡ್ಡ ಮೀಸೆ ಬೆಳೆಯಲು ಅವಕಾಶ ನೀಡುವುದಿಲ್ಲ. ಪ್ರೊಜೆಸ್ಟರಾನ್ ಎಂಬ ಹೆಸರಿನ ಈಸ್ಟ್ರೋಜನ್ ಗುಂಪು ಗರ್ಭಿಣಿಯಾಗುವುದಕ್ಕೆ ಸಂಬಂಧಿಸಿದ ಅನೇಕ ಅಂಶಗಳ ಮೇಲೆ ಹತೋಟಿ ಹೊಂದಿರುತ್ತದೆ. ಹೀಗೆ ಹಾರ್ಮೋನ್ ಗಳಿಂದ ಹೆಂಗಸಿನ ಶರೀರ ಕೋಮಲವಾದರೆ ಗಂಡಸಿನ ಶರೀರ ಗಡಸು ಹಾಗೂ ಬಲಿಷ್ಠ ವಾಗುತ್ತದೆ.