MOTIVATIONAL NOVELS

ಮೋಹದ ನೆರಳು -ಬೆಳಿಗ್ಗೆ ಎದ್ದಾಗ ಅಮ್ಮನ ಮುಖದಲ್ಲಿ ಅದೇನೋ ನೋವು , ಕೆದರಿದ ಕೂದಲು, ಮನಸ್ಸಿಲ್ಲದ ಮನಸ್ಸಿನಿಂದ ಹುಟ್ಟಿರುವ ಸೀರೆ……

ಬೆಳಿಗ್ಗೆ ಎದ್ದಾಗ ಅಮ್ಮನ ಮುಖದಲ್ಲಿ ಅದೇನೋ ನೋವು , ಕೆದರಿದ ಕೂದಲು, ಮನಸ್ಸಿಲ್ಲದ ಮನಸ್ಸಿನಿಂದ ಹುಟ್ಟಿರುವ ಸೀರೆ……

ಆಗ ನನಗೆ ಕೇವಲ ಆರು ವಯಸ್ಸು. ಅಮ್ಮನನ್ನು ಏನೂ ಕೇಳಲು ಧೈರ್ಯವಾಗಲಿಲ್ಲ.

ಅಮ್ಮನನ್ನು ಯಾವಾಗಲೂ ನೋಡಿದ್ದು ಭಯಭರಿತ ಮುಖದಲ್ಲೇ………. ಯಾವಾಗಲೂ ಕೆಲಸ…………

ಬಹಳ ಸಲ ಅನ್ನಿಸಿದ್ದು ನಾನು ಬೇಗ ದೊಡ್ಡವಳಾಗಿ ಕೆಲಸಕ್ಕೆ ಸೇರಿ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂತ…..

ಆ ಕಡೆ ಅಪ್ಪ ಇನ್ನೂ ರೂಮಿನಿಂದ ಹೊರಗಡೆ ಬಂದಿರಲಿಲ್ಲ. ಅಮ್ಮ ತಟ್ಟೆಗೆ ಹಾಕಿದ್ದ ಚಪಾತಿ ತಿನ್ನುತ್ತಾ ಬಹಳ ಸಲ ಅಪ್ಪನ ರೂಮಿನ ಕಡೆ ನೋಡುತ್ತಿದ್ದೆ….

ಬಹಳ ಸಲ ಬೆಳಗ್ಗಿನ ತಿಂಡಿ ತಿನ್ನದೇ ಅಪ್ಪ ಕೆಲಸಕ್ಕೆ ಹೊರಟು ಹೋಗುವುದು ವಾಡಿಕೆ. ಅಪ್ಪ ತಿಂಡಿ ತಿನ್ನದೇ ಹೊರಡುವಾಗ ಅಮ್ಮ ಅಪ್ಪನನ್ನು ಕೂಗಿ ಭಯ ಹಾಗೂ ಮೆಲು ಧ್ವನಿಯಲ್ಲಿ “ಏನು ಅಂದ್ರೆ ತಿಂಡಿ ರೆಡಿ ಆಗಿದೆ ತಿಂದು ಹೋಗಿ” ಅಪ್ಪ ಕೇಳಿಯೂ ಕೇಳದೆ ಹೋಗುವುದು ವಾಡಿಕೆ.

ಹೀಗೆ ವಾರಗಳು ತಿಂಗಳುಗಳು ವರ್ಷಗಳು ಕಳೆದು ನನಗೆ ಎಂಟು ವರ್ಷವಾದಾಗ, ನಮ್ಮ ಮನೆಯಲ್ಲಿ ನಡೆಯುವ ಪ್ರತೀ ಘಟನೆಗಳು ನನ್ನ ಮನಸ್ಸನ್ನು ಘಾಸಿ ಗೊಳಿಸುತ್ತಲೇ ಇದ್ದವು. ಯಾಕಾದರೂ ಈ ಮನೆಯಲ್ಲಿ ಹುಟ್ಟಿದ್ದೇನೆ ಅನಿಸತೊಡಗಿತ್ತು.

ನನ್ನ ಸ್ನೇಹಿತರ ಮನೆಯಲ್ಲಿ ಅವರ ಅಪ್ಪ ಅಮ್ಮ ಗಂಡನ ಮಾತಿಗೆ ಹೆಂಡತಿ ತಲೆ ಆಡಿಸುವುದು, ಹೆಂಡತಿ ವಯ್ಯಾರಕ್ಕೆ ಗಂಡ ತಲೆ ಆಡಿಸುವುದು. ನನ್ನ ಸ್ನೇಹಿತರ ಸಂತಸ ಸಮಾಧಾನದ ದಿನಗಳು ನನ್ನನ್ನು ಅತಿಯಾದ ಬೇಸರಕ್ಕೆ ದೂಡಿದ್ದವು.

ಸ್ನೇಹಿತರೊಡನೆ ಶಾಲೆಗೆ ತೆರಳಿ ತರಗತಿಯಲ್ಲಿ ಕೂತ ನನಗೆ ಅಮ್ಮನ ಭಯ ಸಂಕಟ ತುಂಬಿದ ಮುಖ ಪದೇಪದೇ ನನ್ನನ್ನು ಕಾಡುತ್ತಿತ್ತು….

ಯಾರೊಡನಾದರೂ ಹೇಳಿ ಬಿಕ್ಕಿ ಬಿಕ್ಕಿ ಅಳುವಂತೆ ಮನಸ್ಸಾಗುತ್ತಿತ್ತು. ಆ ನನ್ನ ಸಣ್ಣ ವಯಸ್ಸಿಗೆ ದೊಡ್ಡವರ ವಿಚಾರ ಮಾತನಾಡುವ ಧೈರ್ಯ ಅಥವಾ ಅನುಭವ ನನಗಿರಲಿಲ್ಲ. ಅದೊಂದು ಮಧ್ಯಾಹ್ನ ನನಗೆ ಹೊಟ್ಟೆ ನೋವಾದಂತಾಗಿ ಗುರುಗಳ ಪರವಾಗಿ ಪಡೆದು ಮನೆಯ ಕಡೆ ಹೊರಟೆ…..

ನಿಜ ಹೇಳಬೇಕೆಂದರೆ ಮನೆಗೆ ಹೋಗುತ್ತಿರುವ ಖುಷಿ ಒಂದು ಕಡೆ ಆದರೆ ಇನ್ನೊಂದು ಕಡೆ ಒಳಒಳಗೆ ಅಳುಕಿತ್ತು……..

ಒಂದು ಕಡೆ ಅಮ್ಮನ ಮುಖ ನೋಡಿ ಸಮಾಧಾನವಾಗಬಹುದು ಎಂಬ ಭರವಸೆಯಾದರೆ ರಜೆ ಹಾಕಿ ಮನೆಗೆ ಬಂದ ಪರಿಣಾಮ ನಡೆಸಿ ಭಯ………

ಕೊನೆಗೂ ಮನೆ ತಲುಪಿದೆ………

ಮನೆಯ ಬಾಗಿಲನ್ನು ತಟ್ಟಿದಾಗ ಒಳಗಿನಿಂದ ಬಂದ ಅಮ್ಮ ಅದೇನೋ ಹಾಡನ್ನು ಗುನುಗುತ್ತಿದ್ದರು….

ಅಮ್ಮನನ್ನು ನೋಡಿದಾಗ ಮದುವೆಗೆ ಹೊರಟ ಮಾಡುವಣಗಿತ್ತಿಯೂನೋ ಅನಿಸಿತು…

ಅಮ್ಮನ ಮುಖದಲ್ಲಿ ಬಹಳ ನಗು ಸಮಾಧಾನ…..

ಏನಾಯ್ತು ಎಂದು ಕೇಳುವ ಮನಸ್ಸಾದರೂ ಧೈರ್ಯವಿರಲಿಲ್ಲ……

ಅಂತೂ ಇಂತೂ ಸಮಾಧಾನದಲ್ಲಿದ್ದಾರಲ್ಲ ಅನ್ನೋ ಸಮಾಧಾನ……….

ಇನ್ನೊಂದು ಆಶ್ಚರ್ಯದ ವಿಷಯವೇನೆಂದರೆ ನಾನು ಮಧ್ಯಾಹ್ನ ಮನೆಗೆ ಬಂದದ್ದು ಅವರ ಗಮನಕ್ಕೆ ಬಂದಂತಿರಲಿಲ್ಲ…………

ಅಮ್ಮ ನನ್ನನ್ನು ಕರೆದು “ಇಂದು ನಾನು ಏನಾದರೂ ಸಿಹಿ ಮಾಡಬೇಕೆಂದಿದ್ದೇನೆ” ಎಂದಾಗ “ಅಮ್ಮ ಪಾಯಸ ಮಾಡಮ್ಮ” ಎಂದೆ…………………..

ಅಂದು ಅಮ್ಮ ಉಟ್ಟಿದ್ದ ಅದೇ ನೀಲಿ ಸೀರೆಯಲ್ಲಿ ಇದ್ದರು…. ನನಗೆ ಒಳಒಳಗೆ ತಳಮಳ………

ಅಪ್ಪ ಯಾವಾಗ ಬರುತ್ತಾರೆ ಬಂದಾಗ ಅಮ್ಮನನ್ನು ನೋಡಿ ಖುಷಿ ಪಡುತ್ತಾರೋ ಏನೋ? ಇಲ್ಲ ಎಂದಿನಂತೆ ಮುಖ ಗಂಟಿಕ್ಕಿಕೊಂಡಿರುತ್ತಾರೋ……..

ಎಂದಿನಂತೆ ಸಂಜೆ ಆರು ಗಂಟೆಗೆ ಬರಬೇಕಾಗಿದ್ದ ಅಪ್ಪ ಬರಲೇ ಇಲ್ಲ………….

ಅಮ್ಮನನ್ನು ಕೇಳುವ ಮನಸ್ಸಾದರೂ ಅವರ ಸಮಾಧಾನ ಹಾಳು ಮಾಡುವ ಮನಸ್ಸು ನನಗೆ ಬೇಕಿರಲಿಲ್ಲ…………..

ರಾತ್ರಿಯ ಊಟ ಮುಗಿಸಿ ಹೋಮ್ ವರ್ಕ್ ಮುಗಿಸಿ ನಿದ್ದೆಗೆ ಜಾರಿದ್ದೇ ನನಗೆ ತಿಳಿಯಲಿಲ್ಲ….. ಬೆಳಿಗ್ಗೆ ಎದ್ದಾಗ ಅಮ್ಮ ತಯಾರಿಸಿದ ತಿಂಡಿ ಮುಗಿಸಿ ಶಾಲೆಗೆ ಹೊರಟಾಗ ಸಮಾಧಾನ ಎನಿಸಿತು………….

ನನಗೆ ತಿಳಿದ ಹಾಗೆ ಅಪ್ಪ ಕೆಲವೊಮ್ಮೆ ಕೆಲಸದ ಮೇಲೆ ಹೊರ ಹೋದಾಗ ಒಂದೆರಡು ರಾತ್ರಿ ವಾಪಸು ಬರುತ್ತಿರಲಿಲ್ಲ….

ಎರಡು ದಿನಗಳು ಸಮಾಧಾನದಿಂದ ಕಳೆದ ನನಗೆ ಹಾಯ್ ಅನಿಸಿತು. ಮರುದಿನ ಶಾಲೆಯಿಂದ ವಾಪಸ್ ಬಂದಾಗ ಕೆಲಸ ಮುಗಿಸಿ ಬಂದ ಅಪ್ಪ ರೂಮಿನಲ್ಲಿದ್ದರು. ಅಮ್ಮ ಬಹಳ ಮೌನದಿಂದಲೇ ಕೆಲಸ ಮಾಡುತ್ತಿದ್ದರು.. ಅಮ್ಮನ ಮುಖದಲ್ಲಿ ಹಿಂದಿನ ದಿನದ ಆ ಕಳೆ ಇರಲಿಲ್ಲ…………

ಅಂದು ರಾತ್ರಿ ನನಗೆ ಏನೋ ಭಯ…. ಏನೋ ಅಸಮಾಧಾನ ನಮ್ಮಿಬ್ಬರಿಗೂ ಊಟ ಬಡಿಸಿ ಅಮ್ಮನೂ ಊಟ ಮಾಡಿ ಪಾತ್ರೆ ಪಗಡೆಗಳನ್ನು ತೊಳೆದು ಜೋಡಿಸುವಾಗ ನಾನು ನಿಧಾನವಾಗಿ ಹೆಜ್ಜೆಟ್ಟು ಅಮ್ಮನ ಅಡುಗೆ ಕೋಣೆಗೆ ಹೊರಟೆ…………

ಅಮ್ಮನನ್ನು ತಬ್ಬಿಕೊಂಡೆ…. ಅಮ್ಮ ನನ್ನ ಕಡೆಗೆ ತಿರುಗಿ ಏನು ಕಂದಾ ಎಂದು ಕೇಳಲು…..

“ಅಮ್ಮಾ ಇವತ್ತು ನನ್ನ ಕೊಣೆಯಲ್ಲಿ ಮಲಗು ಎಂದೆ” ಸರಿ ಎಂದು ತಲೆ ಆಡಿಸಿದ್ದರು ಅಮ್ಮ……..

ನಾನು ನನ್ನ ಕೋಣೆಗೆ ಹೋಗಿ ಅಮ್ಮನನ್ನು ಕಾಯುತ್ತಾ ಇದ್ದೆ.. ಅಮ್ಮ ನನ್ನ ಕೋಣೆಗೆ ಬಂದು…. ನನ್ನ ಪಕ್ಕ ಕುಳಿತು ನನ್ನ ಕೂದಲಲ್ಲಿ ಕೈ ಆಡಿಸುತ್ತಾ ಇದ್ದರು…..

ಆದರೆ ಅಮ್ಮನಿಗೆ ಬಹಳ ಚೆನ್ನಾಗಿ ಗೊತ್ತಿತ್ತು…….

ನನಗೆ ನಿದ್ದೆ ಬರುತ್ತಿಲ್ಲವೆಂದು…..

ಆದರೂ ನಾನು ಮಲಗಿದಂತೆ ನಟಿಸಿದೆ………….

ನಾನು ಮಲಗಿದೆ ಎಂದು ತಿಳಿದ ಅಮ್ಮ ನಿಧಾನಕ್ಕೆ ಹೊರಟರು…

ನಾನು ಎಲ್ಲವನ್ನು ಗಮನಿಸಿದೆ…..

ನಾನು ಎಲ್ಲವನ್ನು ಗಮನಿಸಿ ಏನು ಗೊತ್ತಿಲ್ಲದಂತೆ ನಟಿಸಿದೆ………..

ಅಪ್ಪನ ಕೋಣೆಗೆ ಹೋದ ಅಮ್ಮ ಬಾಗಿಲನ್ನು ಹಾಕಿಕೊಂಡರೆ ಎಂದು ಕಾತರಿಪಡಿಸಿ ನಿಧಾನಕ್ಕೆ ಅಪ್ಪನ ಕೋಣೆ ಹತ್ತಿರ ಬಂದ ನನಗೆ ಹೃದಯ ಜೋರಾಗಿ ಬಡಿಯುತ್ತಿತ್ತು…………………

ಅಮ್ಮ ಅಪ್ಪನ ಕೋಣೆಯಿಂದ ಬರುವ ಶಬ್ದಗಳು ಸ್ಪಷ್ಟವಾಗಿಲ್ಲದಿದ್ದರೂ ಅಪ್ಪನ ಗಡುಸಾದ ಧ್ವನಿ ಅಮ್ಮನನ್ನು ಬೈಯುವುದು ನನಗೆ ಅರ್ಥವಾಗುತ್ತಿತ್ತು. ಆ ಕಡೆ ಅಮ್ಮ ಬಿಕ್ಕಿ ಬಿಕ್ಕಿ ಅಳುತ್ತಿರುವುದು ಕೇಳುತ್ತಿತ್ತು…..

ನನಗೆ ದುಃಖ ಉಮ್ಮಳಿಸಿ ಬರುತ್ತಿತ್ತು……….

ನಿಧಾನಕ್ಕೆ ಹೆಜ್ಜೆ ಇಡುತ್ತ ನನ್ನ ಕೋಣೆಯ ಕಡೆಗೆ ತಿರುಗಿ ಬಂದೆ. ರಾತ್ರಿ ಸುಮಾರು 12 ಒಂದು ಗಂಟೆ ನನ್ನ ಬಾಗಿಲ ಬಳಿ ಸದ್ದು ಕೇಳಿ ಕಣ್ಣು ಮುಚ್ಚಿ ಮಲಗಿದಂತೆ ನಟಿಸಿದೆ………

ನನ್ನ ಕೋಣೆ ಒಳಗೆ ಬಂದ ಅಮ್ಮನ ಕಣ್ಣುಗಳು ತೇವವಾಗಿದ್ದು ಕೂದಲು ಕೆದರಿತ್ತು….

ನನಗೆ ಅಮ್ಮನ ಸ್ಥಿತಿ ನೋಡಿ ಜೋರಾಗಿ ಬಿಕ್ಕಿ ಬಿಕ್ಕಿ ಅಳುವ ಮನಸಾಯ್ತು…

ಸೀದಾ ಅಪ್ಪನ ಕೋಣೆಗೆ ಹೋಗಿ ಅಪ್ಪನನ್ನು ಪ್ರಶ್ನಿಸುವ ಮನಸಾಯ್ತು ಆದರೆ ಅದೆಲ್ಲ ನನ್ನ ವಯಸ್ಸಿಗೆ ಬರುವ ಧೈರ್ಯ ಹಾಗೂ ವಿಚಾರವಲ್ಲ…….

ನನ್ನ ಪಕ್ಕದಲ್ಲಿ ರೂಮಿನ ಒಂದು ಕಡೆ ದೃಷ್ಟಿಸಿ ಏನೋ ಕಳೆದುಕೊಂಡಂತೆ ಕೂತಿದ್ದರು ನನ್ನ ಅಮ್ಮ….

ಬೆಳಿಗ್ಗೆ ಎದ್ದಾಗ ಅದೇ ಸಹಜ ಸ್ಥಿತಿ………..

ಅಡುಗೆ ಮನೆಯಲ್ಲಿ ಎಂದಿನಂತೆ ಅಡುಗೆಯಲ್ಲಿ ತೊಡಗಿದ್ದರು ಅಮ್ಮ….

ಅಪ್ಪ ಎಂದಿನಂತೆ ಕೋಣೆಯಿಂದ ಹೊರ ಬಂದಿರಲಿಲ್ಲ….. ಅಪ್ಪ ಹೊರ ಬಂದರೆ ಎದುರಿಗೆ ತಡೆದು ನಿಲ್ಲಿಸಿ ಪ್ರಶ್ನಿಸುವ ಮನಸಾಗುತ್ತಿತ್ತು……………

ಅದೇ ಬೇಸರ ಅದೇ ಸಂಕಟ ಅಪ್ಪ ಎಂದಿನಂತೆ ತಿಂಡಿ ತಿನ್ನದೆ ಬಿಟ್ಟರು…

ಅಂದು ಅಮ್ಮನ ಹುಟ್ಟಿದ ದಿನ……

ನಾವೇನೋ ಹುಟ್ಟಿದ ದಿನ ಆಚರಿಸುತ್ತಿರಲಿಲ್ಲ……… .

ಅಂದು ಶಾಲೆಯಲ್ಲಿ ನನಗೆ ಒಂದು ಕುಂಟು ನೆಪ ಹೇಳಿ ಮನೆಗೆ ಬರುವ ಮನಸಾಯ್ತು . ಸರಿ ಅದೇ ಸುಳ್ಳು ಕಥೆ ಹೊಟ್ಟೆ ನೋವಿನ ಕಥೆ ಹೇಳಿ ಎದ್ದು ಮನೆ ಕಡೆಗೆ ಹೊರಟೆ…

ಮನೆಗೆ ಬಂದಾಗ ಬಾಗಿಲು ತೆರೆದೇ ಇತ್ತು….

ನನಗೆ ಅಮ್ಮನ ಕೋಣೆಯಲ್ಲಿ ಅಮ್ಮ ಕಾಣಲಿಲ್ಲ. ಆದರೆ ಅಮ್ಮನ ಹಾಸಿಗೆ ಮೇಲೆ ಒಂದು ಹೊಸ ಸೀರೆ ಇತ್ತು……

ಅಮ್ಮನನ್ನು ಹುಡುಕಿಕೊಂಡು ಹೋದ ನನಗೆ ಅಮ್ಮ ನನ್ನ ಕೊಣೆಯಲ್ಲಿ ಕೂತಿದ್ದರು…….

ನನ್ನಮ್ಮ ನನಗಿಷ್ಟವಾದ ಒಂದು ಡ್ರೆಸ್ ಒಳಗೆ ಹೋಗುತ್ತಿದ್ದಂತೆ ನನ್ನ ಅಳತೆಗೆ ಸರಿ ಹೋಗುತ್ತದೆಯೋ ಎಂದು ಗಮನಿಸಿ ನನ್ನ ಕೈ ಗಿಟ್ಟರು. ಈಗಲೂ ಆಶ್ಚರ್ಯವೇನೆಂದರೆ….

ನಾನು ಶಾಲೆ ಬಂಕ್ ಮಾಡಿ ಮನೆಗೆ ಬಂದಿದ್ದು ಅಮ್ಮನ ಗಮನಕ್ಕೆ ಬರಲೇ ಇಲ್ಲ…………

ಎಂದಿನಂತೆ ಅಪ್ಪ ಆರು ಗಂಟೆಗೆ ಮನೆಗೆ ಬಂದರು…

ಅಪ್ಪನ ಕೈಯಲ್ಲಿ ಸಿಹಿ ತಿಂಡಿಯ ಒಂದು ಪ್ಯಾಕೆಟ್ ಇತ್ತು…..

ಅದನ್ನು ಮೇಜಿನ ಮೇಲಿರಿಸಿ ಸಮಾಧಾನದಿಂದಲೇ ಕೋಣೆಯತ್ತ ನಡೆದರು….

ಅಂದು ಅಪ್ಪನನ್ನು ನೋಡಿದ ನನಗೆ…

ಅಪ್ಪ ಯಾವಾಗಲೂ ಹೀಗೆ ಇರಬಾರದೇ ಅನಿಸಿತು………

ಹಗಲೆಲ್ಲ ಸಮಾಧಾನದಿಂದಿರುವ ಈ ನನ್ನ ಅಪ್ಪನಿಗೆ ರಾತ್ರಿ ಯಾವ ದೆವ್ವ ಮೆತ್ತಿಕೊಳ್ಳುತ್ತದೆ ಎಂದು ಎಣಿಸಲಾರಂಭಿಸಿತು…………

ಅಂದು ನನಗೆ ಬಹಳವಾಗಿ ಅನಿಸಿದ್ದು ಯಾವುದೇ ಕಾರಣಕ್ಕೂ ಇಂದು ರಾತ್ರಿ, ಅಮ್ಮ ಅಪ್ಪನ ಕೊನೆಗೆ ಹೋಗಬಾರದು…..

ಹೇಗಾದರೂ ತಡೆಯಬೇಕು…..

ಅಪ್ಪನನ್ನು ಎದುರು ಹಾಕಿ ಪ್ರಶ್ನೆ ಮಾಡಿ…

ಅಮ್ಮನನ್ನು ನನ್ನ ಕೋಣೆಯಲ್ಲಿ ಮಲಗಿಸಬೇಕು……….

ಇನ್ನೇನು ಅಮ್ಮ ಅಪ್ಪನ ಕೋಣೆಗೆ ಹೋಗಬೇಕು ಎನ್ನುವಷ್ಟರಲ್ಲಿ ಅಮ್ಮನನ್ನು ಅವರ ಕೋಣೆಯ ಬಾಗಿಲಲ್ಲೇ ತಡೆದ ನಾನು ” ಅಮ್ಮ ಇಂದು ನಿನ್ನ ಹುಟ್ಟಿದ ದಿನ ಇಂದು ನೀನು ನನ್ನೊಂದಿಗೆ ಮಲಗು ಪ್ಲೀಸ್” ಎಂದು ಅಪ್ಪ ಕೇಳಿಸಿಕೊಳ್ಳುವಂತೆ ಹೇಳಿದೆ………

ಅಪ್ಪ ತಿರುಗಿ ನೋಡಲೇ ಇಲ್ಲ ನಮ್ಮಿಬ್ಬರ ಕಡೆ….

ನೋಡಲಿ ಬಿಡಲಿ ಎಂದು ಅಮ್ಮನನ್ನು ಎಳೆಯುತ್ತಾ ನನ್ನ ರೂಮಿನ ಕಡೆಗೆ ಹೊರಟೆ . ನಾನು ಅಂದು ಧೈರ್ಯ ಮಾಡಿ ಅಮ್ಮನನ್ನು ಒಂದು ಪ್ರಶ್ನೆ ಕೇಳಲೇಬೇಕು ಎಂದು ನಿರ್ಧರಿಸಿದೆ…….

” ಅಮ್ಮಾ ಅಪ್ಪ ನಿನ್ನನ್ನು ಹೊಡೆಯುತ್ತಾರೆಯೇ ಎಂಬ ನನ್ನ ಸವಾಲಿಗೆ……

ಅಮ್ಮ ಗಲಿಬಿಲಿಗೊಂಡು “ನೋಡು ಪುಟ್ಟಾಇದು ಗಂಡ ಹೆಂಡತಿ ವಿಷಯ ನೀನು ಇನ್ನು ಚಿಕ್ಕವಳು ನಿನಗೆ ಏನು ತಿಳಿಯದು ನೀನು ದೊಡ್ಡವಳಾದಾಗ ಎಲ್ಲಾ ತಿಳಿಯುತ್ತದೆ ನೀನು ನಿನ್ನ ಓದಿನ ಕಡೆ ಗಮನ ಕೊಡು ಇದರ ಬಗ್ಗೆ ಚಿಂತೆ ಮಾಡಬೇಡ” ಎಂದು ಅವಸರ ಅವಸರವಾಗಿ ಮಾತು ಮುಗಿಸಿದರು….

ಇನ್ನೇನು ನಾನು ನಿದ್ದೆ ಹೋಗಲೆಂದು ಕಾಯುವಂತೆ ಬಾಸವಾಯಿತು ನನಗೆ……

ಅಂದು ನನಗಾದ ಸಮಾಧಾನದಿಂದಲೇ ಏನೂ …. ಎಲ್ಲಿಲ್ಲದ ನಿದ್ದೆ…..

ಕೋಣೆಯ ಬಾಗಿಲಿಗೆ ಒರಗಿಕೊಂಡು ನಿಂತಿದ್ದರು . ಕೂದಲು ಕೆದರಿತ್ತು ಸರಿಯಾಗಿ ಹೇಳಬೇಕೆಂದರೆ ಯಾರೋ ಬಲವಾಗಿ ಹಿಡಿದು ಅವರ ಸೀರೆಯನ್ನು ಹರಿದಂತಿತ್ತು….

ನನ್ನನ್ನು ನೋಡಿದ ಕೂಡಲೇ ಅಮ್ಮ ಸ್ನಾನದ ಕೋಣೆ ಕಡೆ ಹೊರಟರು………

ಅಂದು ಸರಿಯಾಗಿ ಗಮನಿಸಿದ ನನಗೆ ಅಮ್ಮ ಒಂದು ಕಾಲನ್ನು ಕುಂಟಿಸುತ್ತಾ ನಡೆಯುತ್ತಿದ್ದರು…….

ಆಗ ನನಗೆ ಸರಿಸುಮಾರು 15 ವರ್ಷ ಅಮ್ಮನಂತೆ ಹುಟ್ಟಿದ ನಾನು ಅಮ್ಮನಂತೆ ಉದ್ದವಾಗಿ ತೆಳ್ಳಗಾಗಿ ಸುಂದರವಾಗಿದ್ದೆ…….

ಆ ವಯಸ್ಸಿಗೆ ಪೂರ್ತಿ ಅಲ್ಲದಿದ್ದರೂ ಬಹಳ ಮಟ್ಟಿಗೆ ಗಂಡ ಹೆಂಡತಿಯ ಮಧ್ಯೆ ನಡೆಯುವ ಸರಸ ಸಲ್ಲಾಪಗಳ ತಿಳಿದಿದ್ದ ನನಗೆ ಇದೆಂಥ ಗಂಡ ಹೆಂಡತಿ ಜೀವನ ಅನ್ನೋ ವಾಕರಿಕೆ ಬಂತು……..

ಅಂದು ಶಾಲೆಗೆ ಹೊರಟ ನನಗೆ ದಾರಿಯಲ್ಲಿ ಗೆಳತಿಯ ಮನೆ ಹತ್ತಿರ ಬಂದಾಗ ಏನೋ ಹೊಳೆದಂತಾಯಿತು ಸಂಜೆಯವರೆಗೆ ಕಾದಿದ್ದು ಗೆಳತಿಯೊಡನೆ ಸೀದಾ ಅವಳ ಮನೆಯ ಕಡೆ ಹೊರಟೆ………..

ನನ್ನ ಗೆಳತಿಯ ಅಮ್ಮ ನನಗೆ ಕಾಫಿ ಮಾಡಿ ಕೊಟ್ಟು ಎಂದಿನಂತೆ ಮಾತನಾಡಿಸಿದರು….

ನನ್ನ ಗೆಳತಿಯ ಅಮ್ಮ ನನ್ನ ಅಮ್ಮನ ಅಷ್ಟು ಸುಂದರವಾಗಿ ಏನು ಇರಲಿಲ್ಲ………….

ಸರಿ ಸುಮಾರು 37 ವರ್ಷದ ಮಹಿಳೆ……

ಅವರ ಮನೆಯಲ್ಲಿ ನೆಮ್ಮದಿ ಸಂತಸ ಹೊಂದಿಕೊಂಡು ಹೋಗುವ ಜೀವನ ಎಲ್ಲವು ಇತ್ತು………..

ನಮ್ಮನೆಯಲ್ಲಿ ದೇವರು ಅತಿಯಾದ ಸೌಂದರ್ಯ ಕೊಟ್ಟಿದ್ದರೂ ನೆಮ್ಮದಿ ಕೊಟ್ಟಿರಲಿಲ್ಲ………

ನನ್ನ ಗೆಳತಿಯ ಮನೆಯಲ್ಲಿ ದೇವರು ಸೌಂದರ್ಯ ಕೊಡದಿದ್ದರೂ ನೆಮ್ಮದಿ ಕೊಟ್ಟಿದ್ದ…….

ಇವೆರಡನ್ನು ಹೊಂದಿಸಿ ನೋಡಿದಾಗ ನನಗೆ ನೆಮ್ಮದಿಯೇ ಮೇಲು ಎನಿಸಿತು…….

ನಿಧಾನಕ್ಕೆ ಗೆಳತಿಯ ಅಮ್ಮನ ಬಳಿ ಮಾತಿಗಿಳಿದೆ…..

“ಆಂಟಿ ಅಂಕಲ್ ಎಷ್ಟು ಒಳ್ಳೆಯವರೆಲ್ಲವೇ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ” ಎಂದೆ…..

ಅದಕ್ಕೆ ಆಂಟಿ ಉತ್ತರಿಸಿ “ನಿಮ್ಮ ಅಪ್ಪನು ಒಳ್ಳೆಯವರಲ್ಲವೇ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಅಲ್ಲವೇ” ಎಂದರು……

ಏನು ಹೇಳಬೇಕೋ ಗೊತ್ತಾಗಲಿಲ್ಲ……..

ನನ್ನ ಬೆಚ್ಚಾದ ಮುಖ ನೋಡಿ ಆಂಟಿ ಏನೋ ಹೇಳಬೇಕು ಎನ್ನುವಷ್ಟರಲ್ಲಿ ಅವರ ಗಂಡ ನಗುನಗುತ್ತಾ ಮನೆ ಒಳಗೆ ಬಂದರು….

ಅವರ ಸಹಬಾಳ್ವೆಯ ಕುಟುಂಬ ನೋಡಿ ನನಗೆ ಜೋರಾಗಿ ಅಳಬೇಕು ಎನಿಸಿ, ಅಲ್ಲಿಂದ ಮನೆಯ ಕಡೆ ಹೆಜ್ಜೆಯಿಟ್ಟೆ ……..

ಅಂದು ನಾನು ಲೇಟಾಗಿ ಮನೆಗೆ ಬಂದಿದ್ದರಿಂದ ಅಪ್ಪ ಮನೆಯ ಹೊರಗೆ ನಿಂತಿದ್ದರು……….

ಅವರನ್ನು ಕಂಡು ನನಗೆ ಭಯವಾಯಿತು…………..

ನನ್ನನ್ನು ನೋಡಿದ ಕ್ಷಣ ಏನು ಸಮಾಧಾನಗೊಂಡಂತೆ ಒಳ ನಡೆದರು ನನ್ನ ಆ ಅಪ್ಪ ಅನ್ನೋ ವ್ಯಕ್ತಿ…..

ಅಂದು ಮನೆಯಲ್ಲಿ ಅಮ್ಮ ಕಾಣಲಿಲ್ಲ……..

ಅಪ್ಪನನ್ನು ಕೇಳುವ ಮನಸ್ಸಾಗಲಿಲ್ಲ………..

ಸದ್ದಿಲ್ಲದೆ ಬದುಕುವ ಈ ನನ್ನ ಅಪ್ಪ ಒಂದು ದಿನ ನನ್ನ ಅಮ್ಮನನ್ನು ಸಾಯಿಸಿದರೂ ಆಶ್ಚರ್ಯವೇನಿಲ್ಲ ಎನಿಸಿತು….

ನಿಜ……..

ಆ ಯೋಚನೆಯಲ್ಲೇ ಮುಳುಗಿದ್ದ ನನಗೆ, ಯಾರೋ ನನ್ನೆದುರುಗಡೆ ಕಾಫಿಯ ಲೋಟ ಇಟ್ಟಸದ್ದು ಬಂದಂತಾಗಿ ಎದುರಿಗೆ ನೋಡಿದಾಗ ಅಪ್ಪ ನಿಂತಿದ್ದರು………..

ನನ್ನ ಎದುರಿಗೆ ಇಟ್ಟ ಕಾಫಿ ನೋಡಿ ನನಗೆ ಆಶ್ಚರ್ಯವಾಯಿತು……..

ಆದರೂ ಅದನ್ನು ತೋರ್ಪಡಿಸದೆ ಕಾಫಿ ಕುಡಿದು ರೂಮಿನತ್ತ ನಡೆದೆ……

ಹತ್ತನೇ ತರಗತಿಯ ಪರೀಕ್ಷೆಗಳು ಹತ್ತಿರ ಬಂದಿದ್ದವು.. .

ಇನ್ನೇನು ಪುಸ್ತಕ ತೆರೆಯಬೇಕೆಂದಿದ್ದ ನನಗೆ……..

ಬಾಗಿಲ ಬಳಿ ಒಂದು ಸದ್ದಾಯಿತು….

ತಲೆಯಿತ್ತಿ ನೋಡಿದಾಗ ಎದುರಿಗೆ ಮತ್ತೆ ನಿಂತಿದ್ದರು ಅಪ್ಪ.  “ನಿಮ್ಮ ಅಜ್ಜಿಗೆ ಆರೋಗ್ಯ ಕೆಟ್ಟಿದೆ ಎಂದು ಕರೆ ಬಂದಿತ್ತು. ನಿಮ್ಮಮ್ಮ ಊರಿಗೆ ಹೋಗಿದ್ದಾರೆ… ನೀನು ನಿನ್ನ ಕೆಲಸ ಮುಗಿಸು ನಾನು ಹೋಟೆಲ್ ನಿಂದ ಊಟ ತರಿಸುತ್ತೇನೆ”..

ಎಂದು ಹೇಳಿ ಹೊರಟು ಹೋದರು………

ಅವರು ಹೇಳಿದಂತೆ ಹೋಟೆಲ್ ನಿಂದ ನನಗೆ ಇಷ್ಟವಾದ ಊಟವನ್ನು ತರಿಸಿದ್ದರು ನನಗಿಷ್ಟವಾದ ಊಟ ಅವರಿಗೆ ತಿಳಿದಿದೆ ಅನ್ನೋದೇ ಜೀರ್ಣಿಸಲು ಸಾಧ್ಯವಾಗಲಿಲ್ಲ ನನಗೆ….

ಮೊದಲು ಸಲ ನನ್ನ ಜೊತೆ ಊಟಕ್ಕೆ ಕುಳಿತರು ಅಪ್ಪ.

ಕುರುಚಲು ಕೂದಲು, ಸ್ವಲ್ಪ ಬೆಳ್ಳಗಾದ ಗಡ್ಡ, ಸಾಧಾರಣ ಮೈಕಟ್ಟು, ಗೋಧಿ ಬಣ್ಣ……

ಯಾರಾದರೂ ಅವರನ್ನು ನೋಡಿದರೆ ಎಷ್ಟು ಸಮಾಧಾನದ ವ್ಯಕ್ತಿ ಎನಿಸುವುದು ಸುಳ್ಳಲ್ಲ…..

ಅವರಿಗೂ ನಮ್ಮಮ್ಮನಿಗೂ ಇದ್ದ ಒಂದು ದೊಡ್ಡ ವ್ಯತ್ಯಾಸವೆಂದರೆ,,,,,,

ಅವರಿಬ್ಬರ ವಯಸ್ಸು …….

ಸರಿಸುಮಾರು 13 ವರ್ಷ ವ್ಯತ್ಯಾಸ ನನ್ನ ಅಪ್ಪ ಅಮ್ಮನಿಗೆ…..

ಈ ಎಲ್ಲಾ ಯೋಚನೆಗಳ ಮಧ್ಯೆ ಊಟ ಮುಗಿದಿದ್ದೆ ತಿಳಿಯಲಿಲ್ಲ ನನಗೆ……..

ತಟ್ಟೆ ತೆಗೆದುಕೊಂಡು ಅಡುಗೆ ಕೋಣೆ ಒಳಗೆ ಹೋದಾಗ ಅಚ್ಚರಿ ಕಾದಿತ್ತು………..

ಅಡುಗೆ ಕೋಣೆಯಲ್ಲಿ ಪಾತ್ರಗಳು ಎಂದಿನಂತೆ ಹರಡಿಕೊಂಡಿರಲಿಲ್ಲ ಒಪ್ಪವಾಗಿತ್ತು…………

ಹೌದು ….

ಒಪ್ಪವಾಗಿತ್ತು….

ಅಮ್ಮನೊಡೊನೆ ಕೆಟ್ಟ ರೀತಿಯಲ್ಲಿ ವರ್ತಿಸುವ ಹಾಗು ಬಾಲ್ಯದಿಂದಲೂ ನಾನು ದ್ವೇಷಿಸುವ ಹಾಗು ಅಸಹ್ಯ ಪಟ್ಟ ವ್ಯಕ್ತಿ ಇವರೇನಾ ಅನ್ನಿಸಲು ಶುರುವಾಯಿತು………..

ನನ್ನ ತಟ್ಟೆಯನ್ನಷ್ಟೇ ತೊಳೆದು ಕೋಣೆಯ ಕಡೆ ಹೊರಟೆ ನಾನು………..

ಇವತ್ತು ಯಾಕೋ ಎಲ್ಲವು ಬದಲಾದಂತೆ ಅನಿಸತೊಡಗಿತ್ತು……..

ಅಮ್ಮ ಮನೆಯಲ್ಲಿ ಇರಲಿಲ್ಲ…….

ಅಪ್ಪ ಅಪ್ಪನಂತಿರಲಿಲ್ಲ……………..

ಏನಾಗುತ್ತಿದೆ ಇದು… ಎನ್ನುವ ಧ್ಯಾನದಲ್ಲಿ ನಾನು ನಿದ್ದೆಗೆ ಜಾರಿದ್ದೆ…..

ಬೆಳಿಗ್ಗೆ ಎದ್ದಾಗ ಅಡುಗೆ ಕೋಣೆಯಲ್ಲಿ ಮಂದವಾದ ಸದ್ದು………..

ಅಮ್ಮ ಬಂದಿರಬಹುದು ಎಂದು ದಾಪುಗಾಲು ಹಾಕಿ ಅಡುಗೆ ಕೊನೆಗೆ ಹೊರಟ ನನಗೆ ಕಾಣಿಸಿದ್ದು ಅಪ್ಪ…………

ನನ್ನನ್ನು ಕಂಡಿದ್ದೆ,,,, ಕಾಫಿಯ ಲೋಟ ನನ್ನ ಕೈಗಿಟ್ಟರು……………..

ಅಪ್ಪ ಯಾವಾಗಲೂ ಹೀಗೆ ಇರಬಾರದೆ ????? ? ಎನಿಸಿತು ನನಗೆ……..

ಹೀಗೆ ಎರಡು ದಿನಗಳು ಕಳೆದವು……..

ಅಂದು ಮುಂಜಾನೆ ಎದ್ದಾಗ ಅಮ್ಮ ಅಡುಗೆ ಕೋಣೆಯಲ್ಲಿದ್ದರು…….

ಬೆಳಿಗ್ಗೆ ಬಂದು ತಲುಪಿರಬಹುದು…… ಅಪ್ಪ ಕೋಣೆಯಲ್ಲಿದ್ದರು …. ಎಂದಿನಂತೆ ತಿಂಡಿ ತಿನ್ನದೇ ಹೊರಟು ಹೋದರು……

ನನಗೆ ಏನೋ ಒಂದು ತವಕ…… ಅಮ್ಮನೊಂದಿಗೆ ಬಹಳ ವಿಷಯಗಳನ್ನು ಹೇಳಬೇಕು ಅನ್ನೋ ಆತುರ…….

ಅದನ್ನು ಕೇಳಿ ಅಮ್ಮನಿಗೆ ಖುಷಿಯಾಗಬಹುದು ಅನ್ನೋ ಆಸೆ………. ಬೆಳಿಗ್ಗೆ ಅಷ್ಟೆಲ್ಲ ಸಮಯವಿಲ್ಲವಾದ್ದರಿಂದ ನಾನು ಹಾಗೆ ಶಾಲೆಯ ಕಡೆ ಹೊರಟೆ…….. ಸಂಜೆ ಬಂದಾಗಲೂ ಅಮ್ಮನೊಡನೆ ಮಾತನಾಡಬೇಕು…. ಅಪ್ಪ ನನ್ನನ್ನು ನೋಡಿಕೊಂಡ ವಿಚಾರ ಹೇಳಬೇಕು ಎಂದುಕೊಂಡೆ ………..

ಯಾಕೋ ನಮ್ಮಮ್ಮ ಅದನ್ನು ಕೇಳಿಸಿಕೊಳ್ಳುವ ಮನಸ್ಸು ತೋರಿದಂತಿರಲಿಲ್ಲ ಹೋಗಲಿ ಎಂದು ಸುಮ್ಮನಾದೆ……….

ಆದರೆ ಮೊದಲಿಗಿಂತಲೂ ಸ್ವಲ್ಪ ನಗುನಗುತ್ತಾ ಇದ್ದರು ಅಮ್ಮ…. ಅಂದೂ ಅಮ್ಮನನ್ನು ನನ್ನ ಕೋಣೆಗೆ ಕರೆದು ಮಲಗಿಸಿದೆ…. “ಅಮ್ಮಾ ಅಪ್ಪ ಒಳ್ಳೆಯವರಲ್ಲವೇ” ಎಂದು ಪ್ರಶ್ನಿಸಿದೆ……

ನನ್ನ ಪ್ರಶ್ನೆಯಿಂದ ಮೊದಲು ಗಲಿಗಲಿಗೊಂಡ ಅಮ್ಮ ಕೋಪದಿಂದಲೇ “ನಿನ್ನ ಅಪ್ಪ ನಿನಗೆ ಒಳ್ಳೆಯವರಿರಬಹುದು ನನಗಲ್ಲ” ಎಂದು ತೀಕ್ಷ್ಣವಾಗಿ ಉತ್ತರಿಸಿದ್ದರು……… ನನಗೂ ಸ್ವಲ್ಪ ಇರಿಸಿ ಮುರಿಸು ಅನ್ನಿಸಿ ಸುಮ್ಮನಾದೆ……… ಮಲಗಲು ಪ್ರಯತ್ನಿಸಿದೆ………. ಬೆಡ್ ಶೀಟ್ ಹೊತ್ತು ಮಲಗಿದಂತೆ ನಟಿಸಿದೆ………..

ಆ ಕ್ಷಣಕ್ಕೆ ಬಾಗಿಲ ಬಳಿ ಅಪ್ಪನ ಸದ್ದು ಕೇಳಿಸಿತು….. ಆ ಕೂಡಲೇ ಅಮ್ಮ ಎದ್ದು ಅಪ್ಪನ ಕೋಣೆ ಕಡೆಗೆ ಹೊರಟರು……

ಮತ್ತೆ ಅದೇ ಭಯ………..ಆತಂಕ ಕಿರಿಕಿರಿ….. ಇಲ್ಲ ಅಂದು ಮತ್ತೆ ನನಗೆ ನಿದ್ದೆ ಹತ್ತಲೇ ಇಲ್ಲ………. ಸುಮಾರು 12 ಗಂಟೆ ಅಮ್ಮ ಕೋಣೆಗೆ ಬಂದರು………..

ಮಲಗಿದಂತೆ ನಟಿಸಿದ ನನಗೆ ಎಲ್ಲವೂ ಕಾಣುವಂತಿತ್ತು…………….

ಮತ್ತೆ ಅದೇ……….

ಕಣ್ಣಲ್ಲಿ ನೀರು,, ಕೆದರಿದ ಕೂದಲು,,, ಮೈ ಮೇಲೆ ಇದ್ದ ಬಟ್ಟೆ ಅಸಮಂಜಸವಾಗಿದ್ದು ಕಂಡೂ ಕಾಣದಂತಿತ್ತು… ಬೆಳಿಗ್ಗೆ ಎದ್ದಾಗಲೂ ಅಮ್ಮ ಅದೇ ಬಂಗಿಯಲ್ಲಿ ಕುಳಿತಿದ್ದರು………..

ಇದನ್ನೆಲ್ಲಾ ಗಮನಿಸಿದ ನನಗೆ ಎಂಥ ರಾಕ್ಷಸ ನನ್ನ ಅಪ್ಪ…. ಅವನೊಬ್ಬ ಗೋಮುಖ ವ್ಯಾಘ್ರ……..

ನನ್ನೊಡನೆ ಎಷ್ಟು ಪ್ರೀತಿಯಿಂದ ವರ್ತಿಸಿದ ಈ ವ್ಯಕ್ತಿ ರಾತ್ರಿ ಆಗುತ್ತಿದ್ದಂತೆ………. ಎನಿಸುತ್ತಿತ್ತು ತುಂಬಾನೇ ಕೋಪ ಬರುತ್ತಿತ್ತು….

ಕೊನೆಗೂ ನಾನು ಹತ್ತನೇ ತರಗತಿಯ ಪರೀಕ್ಷೆ ಮುಗಿಸಿ ರಜೆ ಮೂಡಿನಲ್ಲಿದೆ………. ಅಪ್ಪ ಆಗಾಗ ಕೆಲಸದ ನಿಮಿತ್ತ ಹೊರ ಹೋಗುವುದು ವಾಡಿಕೆ….

ಆ ಸಂದರ್ಭದಲ್ಲಿ ನನಗೂ….. ನನ್ನಮ್ಮನಿಗೂ ಬಹಳ ಸಮಯ ಸಿಗುತ್ತಿತ್ತು….

ಒಂದು ದಿನ…..

ಅಮ್ಮನ ಪೆಟ್ಟಿಗೆಯಲ್ಲಿದ್ದ ಆ ಒಂದು ಸೀರೆ ನನ್ನ ಕಣ್ಣಿಗೆ ಬಿತ್ತು……..

ಒಂದೆರಡು ಸೀರೆಗಳನ್ನು ನಾನು ಉಟ್ಟುಕೊಂಡು ಸಮಾಧಾನ ಪಟ್ಟೆ…

ಆದರೆ ಅಮ್ಮನ ಆ ನೀಲಿ ಸೀರೆ ಅಲ್ಲೇ ಪಕ್ಕದಲ್ಲಿ ಇತ್ತು…….

ಅದನ್ನು ಎತ್ತಿ ಕೊಂಡಾಗ ಅಮ್ಮನಿಗೆ ಯಾಕೋ ಇಷ್ಟವಾಗಲಿಲ್ಲ ಎನಿಸಿ….. ಹಿಂದಿರಿಸಿ ನನ್ನ ಕೊನೆಗೆ ತೆರಳಿದೆ……………

ಅಮ್ಮನ ಸೀರೆ ಉಟ್ಟುಕೊಂಡಾಗ ನಾನು ಬೆಳೆದಿದ್ದೇನೆ……… ಅಮ್ಮನ ಅಚ್ಚಿನಂತಿದ್ದೇನೆ………… ಅಮ್ಮನಂತೆ ನನಗೂ ಜವಾಬ್ದಾರಿ ಬಂದಿದೆ………… ನನಗೆ ಸಹನೆ ಧೈರ್ಯ ಎಲ್ಲವೂ ಬಂದಿದೆ ಎನಿಸಲಾರಂಭಿಸಿತು…… ಏನೋ ಎಲ್ಲಿಲ್ಲದ ಧೈರ್ಯ ನನ್ನಲ್ಲಿ..

ಅಮ್ಮನ ಮೇಲೆ ನನಗೆ ಎಲ್ಲಿಲ್ಲದ ಕರುಣೆ….. ಇದಕ್ಕೆ ಒಂದು ಬಲವಾದ ಕಾರಣವಿತ್ತು…….

ಒಂದೆರಡು ಸಲ ನನ್ನ ಅಪ್ಪ ಅಮ್ಮನ ಜಗಳತಾರಕ್ಕಕ್ಕೆ ಏರಿದಾಗ ….

ನನ್ನ ಅಮ್ಮ ಹೇಳಿದ ಆ ಒಂದು ಮಾತು “ನಮಗೆ ಮಗಳಿಲ್ಲದಿದ್ದರೆ ಎಂದೋ ನಿಮ್ಮನ್ನು ಬಿಟ್ಟು ಈ ನರಕದಿಂದ ಹೋಗಿ ಬಿಡುತ್ತಿದ್ದೆ……….. ನೇಣು ಹಾಕಿಕೊಂಡು ಸಾಯುತ್ತಿದ್ದೆ……..

ಈ ಒಂದು ಮಾತು ನನ್ನನ್ನು ಪದೇಪದೇ ಕಾಡುತ್ತಿತ್ತು

ಆದರೆ,,,,

ಅಮ್ಮನಿಲ್ಲದ ಸಂದರ್ಭದಲ್ಲಿ ಅಪ್ಪ ನನ್ನನ್ನು ನೋಡಿಕೊಂಡ ಆ ರೀತಿ ನನ್ನನ್ನು ಗೊಂದಲಕ್ಕೀಡು ಮಾಡಿತ್ತು…..

ಒಂದು ರಾತ್ರಿ ನಮ್ಮ ಅಪ್ಪನ ನಿಜವಾದ ಮುಖ ತಿಳಿಯಬೇಕು ಎಂದು ಧೈರ್ಯ ಮಾಡಿದೆ….

ಆದರೆ ಹೇಗೆ ಎಂದು ತಿಳಿಯಲಿಲ್ಲ …………

ಯಾಕೆಂದರೆ ನನ್ನ ಜೊತೆ ಬಹಳ ವಿನಯದಿಂದ ಸಹನೆ ಪ್ರೀತಿಯಿಂದ ವರ್ತಿಸುವ ನಮ್ಮಪ್ಪ ಅಮ್ಮನೊಡನೆ ಅಷ್ಟೊಂದು ಯಾಕೆ ಕ್ರೂರವಾಗಿ ವರ್ತಿಸುತ್ತಾರೆ…..

ಅನ್ನೋ ಆತಂಕ ಕುತೂಹಲ……..

ಒಂದು ದಿನ ಬಹಳ ಧೈರ್ಯ ಮಾಡಿ ಎಷ್ಟೋ ದಿನದಿಂದ ಯೋಚನೆ ಮಾಡಿದ ಆ ಒಂದು ಕೆಲಸ ಮಾಡಲೇಬೇಕೆಂದು ನಿರ್ಧರಿಸಿದೆ……….

ಅಂದು ರಾತ್ರಿ ನನಗೆ ಭಯ,,, ಆತಂಕ,,, ಸಮಾಧಾನದ ಜೊತೆಗೆ ಜೀವನದಲ್ಲಿ ಯಾರೂ ಮಾಡದ ತಪ್ಪು,,,,, ನಾನು ಮಾಡಲು ಹೊರಟಿದ್ದೇನೆ ಅನ್ನೋ ಗಿಲ್ಟ್ ಕಾಡುತ್ತಿತ್ತು…….

ಕೈಕಾಲು ನಡುಗುತ್ತಿದ್ದವು…

ಏನಾದರೂ ಹೆಚ್ಚು ಕಡಿಮೆ ಆದರೆ ಏನು ಗತಿ ಅನ್ನೋ ಆತಂಕ……

ಆದರೂ ನಿರ್ಧಾರವಾಗಿತ್ತು ನನ್ನ ದಿಟ್ಟ ನಡೆ………….

ನನ್ನ ಹೆತ್ತ ಅಮ್ಮನಿಗೆ ಕೊಡಿಸಬೇಕಾದ ನ್ಯಾಯದ ರಾತ್ರಿ ಅದಾಗಿತ್ತು……

ಹಾಲಿನ ಲೋಟದಲ್ಲಿ ಸಣ್ಣದಾದ ಒಂದು ನಿದ್ರೆ ಮಾತ್ರೆ ಬೆರೆಸಿ ಲೋಟವನ್ನು ಅಮ್ಮನ ಕೈಗಿತ್ತೆ……..

ಇದರ ಒಳ ಅರ್ಥ ತಿಳಿಯದ ನನ್ನ ಅಮ್ಮ ಹಾಲನ್ನು ಗಟಗಟನೆ ಕುಡಿದರು…………

“ಅಯ್ಯೋ ಎಷ್ಟು ಅಮಾಯಕರು ನನ್ನ ಅಮ್ಮ.

ಇಂತಹ ಅಮಾಯಕ ಹೆಣ್ಣುಮಗಳಿಗೆ ಅಂತಹ ಗೋಮುಖ ವ್ಯಾಗ್ರನೆ ಸಿಗಬೇಕಿತ್ತ” ಅನಿಸಿತು……… ಹಾಲಿನ ಲೋಟದಲ್ಲಿ ಬೆರೆಸಿದ ನಿದ್ರೆ ಮಾತ್ರೆಯಿಂದ ಗಾಢ ನಿದ್ರೆಗೆ ಜಾರಿದ್ದರು ನನ್ನ ಅಮ್ಮ…………

ನಾನು ಅಮ್ಮ ದಿನಾ ಉ ಡುತಿದ್ದ ಸೀರೆ ಉಟ್ಟುಕೊಂಡೆ….

ನಿಧಾನಕ್ಕೆ ಹೆಜ್ಜೆ ಇಟ್ಟು ನನ್ನನ್ನು ಹೆತ್ತ ಅಪ್ಪನ ಕೋಣೆಯ ಕಡೆಗೆ ಸಾಗಿದೆ….

ಅವರನ್ನು ಅಪ್ಪಾ ಎನ್ನಬೇಕೋ …. ಅಥವಾ ರಾಕ್ಷಸ… ಎನ್ನುವ ಸವಾಲಿಗೆ ಇಂದು ನನಗೆ ಖಂಡಿತ ಉತ್ತರ ಸಿಗುವ ಭರವಸೆ ಇತ್ತು…………….

ಕೈಕಾಲುಗಳು ನಡುಗಿ ಗಂಟಲು ಒಣಗುತ್ತಿದ್ದರೂ,,,,,,,,

ಅಪ್ಪನ ಬಾಗಿಲ ಬಳಿ ತಲುಪಿದ್ದ ನನಗೆ,,,,,,,,,,

ಅಪ್ಪ ಗೋಡೆಯ ಕಡೆ ತಲೆ ಮಾಡಿ ಮಲಗಿರುವುದು ಖಾತರಿ ಆಯ್ತು……………

ನಿಧಾನಕ್ಕೆ ಬಾಗಿಲು ತಳ್ಳಿ ಅಪ್ಪ ಮಲಗಿದ್ದ ಬೆಡ್ಡಿನ ಪಕ್ಕ ತಲುಪಿದೆ……

ಹುಣ್ಣಿಮೆ ಚಂದ್ರನ ಕಡಿದಾದ ಬೆಳಕು ಕಿಟಕಿಯಿಂದ ನನ್ನಡೆಗೆ ಇಣುಕಿ ಕಳ್ಳನನ್ನು ಹಿಡಿಯಲು ತವಕ ಪಡುವಂತಿತ್ತು…………….

ನಾನು ಅಮ್ಮ ಮಲಗುವ ಜಾಗದಲ್ಲಿ ನಿಧಾನಕ್ಕೆ ಕುಳಿತು………….

ನಿಧಾನವಾಗಿ ದಿಂಬಿಗೆ ಒರಗಿ ಹೊದಿಕೆ ಹೊತ್ತುಕೊಂಡೆ………

ನನ್ನ ಪ್ರಕಾರ ನಾನು ಒಳಗೆ ಬಂದಿದ್ದು ಅಪ್ಪ ಗಮನಿಸಿದಂತೆ ಭಾಸವಾದರೂ……… ಬಂದಿದ್ದು ಅಮ್ಮ ಅಲ್ಲ ಅವರೇ ಹೆತ್ತ ಮಗಳು ಅನ್ನೋದು ಅಪ್ಪನಿಗೆ ತಿಳಿದಂತಿರಲಿಲ್ಲ……….

ಬಹಳ ಹೊತ್ತಿನ ಬಳಿಕ ಅಪ್ಪ ಮೆಲು ದ್ವನಿಯಲ್ಲಿ “ಊಟ ಮಾಡಿದ್ಯ ಮಧು?” ಎಂದು ಕೇಳಿದರು.

ಒಮ್ಮೆಲೇ ಕೇಳಿದ ಈ ಸವಾಲಿನಲ್ಲಿ ಅಪ್ಪನ ಕರ್ಕಶ ದ್ವನಿ ಏನೋ ಇರಲಿಲ್ಲ………

ಮತ್ತೆ ಅಪ್ಪನ ಧ್ವನಿ “ಮಗಳು ಮಲಗಿದಳೆ?” ಮತ್ತೆ ಮೆದುವಾದ ಧ್ವನಿಯಲ್ಲಿ ಇನ್ನೊಂದು ಪ್ರಶ್ನೆ………….

ನನಗೆ ನನ್ನ ಕಿವಿಗಳನ್ನೇ ನಂಬಲಾಗಲಿಲ್ಲ ನಾನು ಸುಮ್ಮನಾದೆ…. ನನ್ನ ಅಪ್ಪ ನನ್ನ ಕಡೆ ತಿರುಗಿ ಮಲಗಿದರು…. ನನಗೆ ಆತಂಕ ಭಯ ಎದ್ದು ಓಡಿ ಹೋಗುವ ಎನ್ನುವಷ್ಟು ನಡುಕ……. ನನ್ನ ಎದೆಯ ಬಡಿತ ನನಗೆ ಕೇಳಿಸುವಂತಿತ್ತು……….

ಅಪ್ಪ ನಿಧಾನಕ್ಕೆ ನನ್ನ ಭುಜದ ಮೇಲೆ ಕೈ ಇಟ್ಟು

“ಮಧು ಈಗಲಾದರೂ ನನ್ನ ಮಾತು ಕೇಳು ಮಗಳು ದೊಡ್ಡವಳಾಗಿದ್ದಾಳೆ . ಅವಳಿಗೆ ಎಲ್ಲವೂ ತಿಳಿಯುವ ವಯಸ್ಸು. ಅವಳ ಕಡೆ ಹೆಚ್ಚಿನ ಗಮನ ಕೊಡು” ಎಂದರು ಮೆಲು ಧ್ವನಿಯಲ್ಲಿ………… .

ನನಗೆ ಏನಾಗುತ್ತಿದೆ ಎಂದು ಅರ್ಥವಾಗಲಿಲ್ಲ……. ಅಲುಗಾಡದೆ ಸುಮ್ಮನಾದೆ ಬಹಳ ಸಮಯದ ನಂತರ ನನ್ನ ಭುಜದ ಮೇಲೆ ಇಟ್ಟ ಕೈ ಹಾಗೆ ಇಟ್ಟು ಅಪ್ಪನಿದ್ರೆಗೆ ಜಾರಿದರು…………..

ನಾನು ನಿಧಾನಕ್ಕೆ ಅವರ ಕೈಯನ್ನು ಪಕ್ಕಕ್ಕೆ ಸರಿಸಿ ಎದ್ದು ನನ್ನ ಕೋಣೆಗೆ ಬಂದೆ ……………. .

ಪ್ರಜ್ಞೆಯೇ ಇಲ್ಲದಂತೆ ಮಲಗಿದ್ದರು ನನ್ನ ಅಮ್ಮ…. ಬೆಳಗಿನ ನಾಲ್ಕರ ಜಾವ ನನಗೆ ಬಂದಿದ್ದ ಕೊಂಚ ನಿದ್ರೆಯಿಂದ ಎಚ್ಚರವಾಯಿತು…. ಎಷ್ಟೇ ಪ್ರಯತ್ನ ಪಟ್ಟರೂ ನಿದ್ರೆ ಹತ್ತಲೇ ಇಲ್ಲ…

ರಾತ್ರಿ ಅಪ್ಪ ಮಾತನಾಡಿದ ರೀತಿ… ಅಪ್ಪನ ಮೃದುವಾದ ಮಾತು……….. ಮೆತ್ತನೆಯ ಸ್ಪರ್ಶ………..

ಸುಮಾರು ಬೆಳಗಿನ ಐದರ ಮುಂಜಾನೆ……. ತಟ್ಟನೆ ಅಮ್ಮ ಎದ್ದು ಕುಳಿತರು ನಾನು ಹೊದ್ದಿದ್ದ ಹೊದಿಕೆಯಿಂದಲೇ ಅಮ್ಮನನ್ನು ಗಮನಿಸಿದೆ………

ಅಮ್ಮ ಗಲಿಬಿಲಿಗೊಂಡಂತೆ ಅವಸರವಾಗಿ ಎದ್ದು ನನ್ನ ಕೋಣೆಯಿಂದ ಹೊರ ನಡೆದರು.

ನಾನು ಅಮ್ಮನನ್ನು ಗಮನಿಸಿದ್ದು ಅಮ್ಮನಿಗೆ ತಿಳಿಯಲಿಲ್ಲ…… ಎದ್ದು ಹೊರಗೆ ಹೋದಾಗ ಅಮ್ಮ ಸ್ನಾನ ಮುಗಿಸಿ ಎಂದಿನಂತೆ ಅಡುಗೆ ಕೋಣೆಯಲ್ಲಿದ್ದರೂ ಬಹಳ ಸುಸ್ತಾದಂತೆ ಕಾಣುತ್ತಿದ್ದರು….. ಅವರ ಮುಖ ಬಾಡಿಹೋಗಿತ್ತು.

ಎಂದಿನಂತೆ ಅಪ್ಪ ಬೆಳಗಿನ ತಿಂಡಿ ತಿನ್ನದೇ ಕೆಲಸಕ್ಕೆ ಹೊರಟರು. ನಾನು ತಿಂಡಿ ಮುಗಿಸಿ ಶಾಲೆಯ ಕಡೆ ಹೊರಟೆ…. .

ತರಗತಿ ಮುಗಿದು ತರಗತಿಗಳಾದರೂ ನನ್ನ ಗಮನಕ್ಕೆ ಬರಲಿಲ್ಲ….

ಮನಸ್ಸು ಪೂರ್ತಿ ರಾತ್ರಿ ನಡೆದ ಆ ಘಟನೆ… ಅಪ್ಪನ ಮುಖ ಮೃದು ಮಾತುಗಳು…. ನನ್ನನ್ನು ಬೆಂಬಿಡದೆ ಸತಾಯಿಸುತ್ತಿದ್ದವು…………

ಮಧ್ಯಾಹ್ನ ಊಟದ ಸಮಯಕ್ಕೆ ಅದೇ ಕುಂಟು ನೆಪ ಹೇಳಿ ಮನೆಗೆ ಹೊರಟೆ………….

ಅದು ಸುಮಾರು ಮಧ್ಯಾಹ್ನ 1:45ರ ಸಮಯ ಮನೆಯ ಮುಂಭಾಗಲು ತೆರೆದೇ ಇತ್ತು….ಒಳಗೆ ಯಾರೋ ಇದ್ದ ಹಾಗಿತ್ತು.

ಮನೆಯ ಹಾಲಿಗೆ ಕಾಲಿಡುವಾಗ ಸುಮಾರು 40ರ ವಯಸ್ಸಿನ ವ್ಯಕ್ತಿಯೊಬ್ಬರು ಕುಳಿತು ನನ್ನ ಅಮ್ಮನೊಡನೆ ಸಹಜವಾಗಿಯೇ ಮಾತನಾಡುತ್ತಿದ್ದರು…………..

ಇವರನ್ನ ನೋಡುತ್ತಿದ್ದಂತೆ ….. ಎಲ್ಲೋ ನೋಡಿದ ನೆನಪಾಯಿತು……. ತುಂಬಾ ಯೋಚಿಸಿದ ನಂತರ ಹೌದು ನನ್ನ ಹಾಗೂ ನನ್ನ ತಮ್ಮನ ಹುಟ್ಟಿದ ಹಬ್ಬಕ್ಕೆ ಬಟ್ಟೆ ಕೊಡಿಸಿದ್ದು ಇವರೇ ಎಂಬ ನೆನಪಾಯಿತು……….

ಆಗ ನಾವು ತುಂಬಾ ಚಿಕ್ಕವರಾಗಿದ್ದೆವು…….

ನನ್ನನ್ನು ನೋಡಿದ ಕೂಡಲೇ ಆ ವ್ಯಕ್ತಿ ” ಓ ನಿನ್ನ ಮಗಳು ದೊಡ್ಡವಳಾಗಿದ್ದಾಳೆ…. . ನಿನ್ನಂತೆ ಇದ್ದಾಳೆ” ಎಂದರು……….

ಅಮ್ಮ ನಸು ನಕ್ಕರು.

ಆ ವ್ಯಕ್ತಿ ಇನ್ನು ಏನಾದರೂ ಹೇಳಬಹುದು ಎಂಬ ಇರಿಸು ಮುರಿಸಿನಿಂದ ಅಲ್ಲಿಂದ ಸೀದ ನನ್ನ ಕೋಣೆಗೆ ತೆರಳಿದೆ. ಹೆಚ್ಚು ಕಡಿಮೆ ಎರಡು ತಾಸುಗಳ ಕಾಲ ಆ ವ್ಯಕ್ತಿ ಮಾತನಾಡುತ್ತಲೇ ಇದ್ದ……..

ಇತ್ತ ಕಡೆ ನಾನು ಮನೆಗೆ ಬಂದಿದ್ದು ಅಮ್ಮನ ಗಮನಕ್ಕೆ ಬಂದೇ ಇಲ್ಲ…..

ಸಣ್ಣ ನಿದ್ದೆಗೆ ಜಾರಿದ ನನಗೆ ಸಂಜೆಯ ನಾಲ್ಕರ ಸಮಯಕ್ಕೆ ಎಚ್ಚರವಾಯಿತು…….

ಅಂದು ಅಮ್ಮ ಅವರ ಪ್ರೀತಿಯ ಅದೇ ನೀಲಿ ಸೀರೆ ಉಟ್ಟು ಖುಷಿಯಾಗಿದ್ದರು ಯಾವುದೋ ಹಾಡು ಗುನುಗುತ್ತಿದ್ದರು.

ಅಂದು ಆಗಲೇ ಅಡುಗೆ ಮನೆಯಲ್ಲಿ ಪಾತ್ರೆಯಲ್ಲಿ ಬಿಸಿ ಬಿಸಿ ಪಾಯಸ ನನ್ನನ್ನು ಸ್ವಾಗತಿಸುತ್ತಿತ್ತು……

ಅದನ್ನು ಸವಿದ ನಾನು ನನ್ನ ಕೋಣೆಗೆ ತೆರಳಿ ನನ್ನ ಪಠ್ಯದ ಕಡೆಗೆ ಗಮನವಿತ್ತೆ…………

ಅಂದು ಸಂಜೆಯಾದರೂ ಅಪ್ಪನ ಸುದ್ದಿಯೇ ಇರಲಿಲ್ಲ…..

ನಾನು ಅಮ್ಮನನ್ನು ಕೇಳುವ ಗೋಜಿಗೆ ಹೋಗಲಿಲ್ಲ…..

ಕೆಲವು ದಿನಗಳು ಹೀಗೆಯೇ ಉರುಳಿದವು……….

ಅಂದು ಬೆಳೆಗ್ಗೆ ಅಪ್ಪನ ಕೋಣೆಯಿಂದ ಹೊರಬಂದ ಅಮ್ಮನ ಸ್ಥಿತಿ ನೋಡಲಾಗಲಿಲ್ಲ….

ಕೂದಲು ಕೆದರಿತ್ತು….. ಸೀರೆ ಅಸ್ತವ್ಯಸ್ತವಾಗಿತ್ತು…. ಕಾಲನ್ನು ಕುಂಟುತ್ತಾ ಎಳೆಯುತ್ತಾ ಸ್ನಾನದ ಕೋಣೆಯ ಕಡೆಗೆ ಸಾಗುತ್ತಿದ್ದರು….

ಅಮ್ಮನನ್ನು ಕಂಡು ಅಯ್ಯೋ ಅನ್ನ ಬೇಕೇ ಅಥವಾ ಅಪ್ಪನನ್ನು ನೆನೆಸಿ ಅಸಹ್ಯ ಎನ್ನಬೇಕೇ ಗೊಂದಲ…… ಹೆಚ್ಚು ಸಮಯ ಮನೆಯಲ್ಲಿ ಇರಲು ಸಾಧ್ಯವಾಗಲಿಲ್ಲ ನನ್ನಿಂದ. ಬೇಗ ಲಂಚ್ ತೆಗೆದುಕೊಂಡು ಹೊರಟೆ ಶಾಲೆಯ ಕಡೆಗೆ…..

ನನಗೆ ಆಗಾಗಲೇ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಆರಂಭಗೊಂಡಿದ್ದವು…. .

ಮನೆಯಲ್ಲಿ ಓದುವ ವಾತಾವರಣವಿಲ್ಲದ ನೆಪ ಹೇಳಿ ನನ್ನ ಗೆಳತಿಯ ಮನೆಯಲ್ಲಿ ಓದುವುದಾಗಿ ಅಮ್ಮನಿಗೆ ತಿಳಿಸಿ ಹೊರಟೆ… ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಸಹಜವಾಗಿ ಮಧ್ಯಾಹ್ನಕ್ಕೆ ಮುಗಿಯುತಿದ್ದವು. . ಈ ಎಲ್ಲದರ ಮಧ್ಯೆ ನನ್ನ ಅಪ್ಪ ಅಮ್ಮ ನನ್ನ ಓದಿನ ಕಡೆಗೆ ಜಾಸ್ತಿ ಗಮನ ಕೊಟ್ಟಂತಿರಲಿಲ್ಲ…….

ಅಂದು ನನ್ನ ಕೊನೆಯ ಪರೀಕ್ಷೆ….. ಮಧ್ಯಾಹ್ನ ಶಾಲೆ ಮುಗಿಸಿ ನೇರನೇರ ಮನೆಗೆ ಬಂದೆ…….. ಮನೆಗೆ ತಲುಪಿದಾಗ ಮನೆಯ ಕೊಂಚ ದೂರದಲ್ಲಿ ಬೈಕ್ ಒಂದು ನಿಂತುಕೊಂಡಿತ್ತು ……..

ಮನೆಗೆ ತಲುಪಿದಾಗ ಅಮ್ಮನ ನಗುಮುಖದ ಮಾತುಗಳು ಕೇಳಿ ಬರುತ್ತಿದ್ದವು………. ಮತ್ತದೇ ಮೊದಲು ನೋಡಿದ ವ್ಯಕ್ತಿ… ಅಂಕಲೆಂದು ಅವರನ್ನು ಕರೆದ ನೆನಪು ನನಗೆ……

ಸುಮಾರು ಒಂದು ಗಂಟೆಗಳ ಕಾಲ ಆ ವ್ಯಕ್ತಿ ಮಾತನಾಡುತ್ತಲೇ ಇದ್ದಿದ್ದು ಕಂಡು………… ನಾನು ಮತ್ತೆ ನನ್ನ ಗೆಳತಿಯ ಮನೆಗೆ ಹೋಗುವುದಾಗಿ ಹೊರಗೆ ಬಂದೆ.

ನನ್ನ ಗೆಳತಿಯ ಮನೆಗೆ ತಲುಪಿದಾಗ ಅವಳು ಮನೆಯಲ್ಲಿ ಇರಲಿಲ್ಲವಾದ್ದರಿಂದ……. ಹೋದ ದಾರಿಗೆ ಸುಂಕವಿಲ್ಲವೆಂದು ವಾಪಸದೆ……..

ಈ ಸಲ ಮನೆಯ ಮುಂಭಾಗಲು ಕೊಂಚ ಮುಚ್ಚಿದಂತಿತ್ತು……… ಆದರೆ ದೂರದಲ್ಲಿ ನಿಂತಿದ್ದ ಆ ಬೈಕು ಅದೇ ಜಾಗದಲ್ಲಿ ಅಲುಗಾಡದೆ ನಿಂತಿತ್ತು…..

ನಾನು ಮುಂಭಾಗದನ್ನು ನಿಧಾನಕ್ಕೆ ತಳ್ಳಿದೆ….

ಅದು ನಿಧಾನಕ್ಕೆ ತೆರೆದುಕೊಂಡಿತು………

ಹಾಲಿನಲ್ಲಿ ಯಾರು ಇರಲಿಲ್ಲ….

ನಿಧಾನಕ್ಕೆ ಹೆಜ್ಜೆ ಇಟ್ಟ ನನಗೆ ಅಪ್ಪನ ಕೋಣೆಯಿಂದ ಅಮ್ಮನ ಮೆಲು ಧ್ವನಿಯಿಂದ ಬರುವ ಮಾತುಗಳು ಕೇಳಿ ಬರುತ್ತಿದ್ದವು.

“ನನ್ನ ಮಗಳಿಗೆ ನನ್ನ ಮೇಲೆ ಪೂರ್ಣ ವಿಶ್ವಾಸವಿದೆ”…

“ಅವಳಿಗೆ ನನ್ನ ಮೇಲೆ ಕರುಣೆ ಇದೆ”…

ಅವಳಿಗೆ ನನ್ನ ಬಗ್ಗೆ ಕಾಳಜಿ ಇದೆ ಅವಳು ನನ್ನ ನಂಬುತ್ತಾಳೆ”………..

ಹೀಗೆ ಮುಂದುವರಿದು…………….

“ಅವಳಿಗೆ ಅವಳ ಅಪ್ಪನನ್ನು ಕಂಡರೆ ಕೆಂಡದಂತ ಕೋಪ”. “ಅಪ್ಪನನ್ನು ನೋಡಿದರೆ ಉರಿಯುತ್ತಾಳೆ”.

“ನಮ್ಮ ಎಲ್ಲಾ ಯೋಜನೆಗಳು ಸಫಲಗೊಳ್ಳುತ್ತಿವೆ. ಇನ್ನು ನನ್ನ ಮಗನನ್ನು ನಂಬಿಸಿದರೆ…. ಅವರ ಅಪ್ಪನ ಬಗ್ಗೆ ಕೀಳರಿಮೆ ತುಂಬಿದರೆ ನಮ್ಮ ದಾರಿ ಸುಗಮವಾಗಲಿದೆ”………..

ಈ ಮಾತುಗಳನ್ನು ಕೇಳಿ ನನ್ನ ಕಿವಿಗಳನ್ನು ನಂಬುವ ಸಹಜ ಸ್ಥಿತಿಯಲ್ಲಿ ನಾನು ಇರಲೇ ಇಲ್ಲ………….

ಬಹಳ ಸಂಕಟವಾಯಿತು ನನಗೆ……..

ಅಪ್ಪನ ಕೋಣೆಯ ಬಾಗಿಲನ್ನು ಕೊಂಚವೇ ತಳ್ಳಿದ ನನಗೆ ಆಕಾಶವೇ ಕಳಚಿ ಬಿದ್ದಂತಾಯಿತು……… .

ಆ ವ್ಯಕ್ತಿಯ ಬಾಹುಗಳಲ್ಲಿ ನನ್ನ ಅಮ್ಮ…………………………………….

ಆ ವ್ಯಕ್ತಿಯು ಅಮ್ಮನ ಗುಂಗುರು ಕೂದಲುಗಳಲ್ಲಿ ಕೈ ಆಡಿಸುತ್ತಾ ಅದೇನೋ ಪಿಸುಗುಡುತ್ತಿದ್ದರು …………

ನನ್ನನ್ನೇ ನಾನು ಸಂಭಾಳಿಸಿಕೊಂಡು ಅಲ್ಲಿಂದ ಕಾಲ್ ಕಿತ್ತು ನನ್ನ ಕೊಠಡಿಗೆ ತೆರಳಿ ಬಾಗಿಲು ಮುಚ್ಚಿಕೊಂಡೆ……….

ಏನು ನಡೀತ್ತಿದೆ ಎಂಬ ಗ್ರಹಿಕೆಯು ಕಷ್ಟವಾಗಿತ್ತು ನನ್ನಿಂದ….

ಇಷ್ಟು ದಿನ ನಾನು ನೆನೆಸಿದ ಗಡಸು ಹಾಗೂ ಕರ್ಕಶ ದ್ವನಿಯಾ ನನ್ನ ಅಪ್ಪ….

ನಿಜವಾಗಲೂ ದುಷ್ಟ ವ್ಯಕ್ತಿಯೇ ಅಥವಾ ಅಂದು ಅವರ ಕೋಣೆಯಲ್ಲಿ ಅಮ್ಮನಂತೆ ನಾನು ನಟಿಸಿ ಅವರ ಪಕ್ಕದಲ್ಲಿ ಮಲಗಿದ ನನ್ನನ್ನು ಪ್ರೀತಿಯಿಂದ ನೇವಳಿಸಿದ ಆ ನನ್ನ ಅಪ್ಪ ಸಜ್ಜನ ವ್ಯಕ್ತಿಯೇ?……….

ಅನ್ನುವ ಗೊಂದಲ ಶುರುವಾಯಿತು.

ಒಂದು ವೇಳೆ ನನ್ನ ಅಪ್ಪ ಸಹನೆಯ ಪ್ರೀತಿಯ ವ್ಯಕ್ತಿಯಾಗಿದ್ದರೆ ನನ್ನ ಅಮ್ಮನ ಮೇಲೆ ಪ್ರತೀ ರಾತ್ರಿ ನಡೆದ ಆ ದೌರ್ಜನ್ಯ?

ಇದರಲ್ಲಿ ಯಾವುದು ಸತ್ಯ?

ಇಂದು ನಾನು ಕಿವಿಯ್ಯಾರೆ ಕೇಳಿಸಿಕೊಂಡಿದ್ಧೋ ???

ಅಥವಾ

ನನ್ನ ಅಮ್ಮನೊಡನೆ ಅಪ್ಪನ ದೌರ್ಜನ್ಯ?

ಈ ಚಿಂತೆಯಿಂದಿರುವಾಗ ನನ್ನ ಕೋಣೆಯ ಬಾಗಿಲನ್ನು ತಳ್ಳಿ ಒಳಬಂದ ನನ್ನ ಅಮ್ಮ ನನ್ನೊಡನೆ ಏನು ಮಾತನಾಡಲು ಪ್ರಯತ್ನಿಸಿದರು……..

ನಾನು ಮಲಗಿದಂತೆ ನಟಿಸಿದ್ದರಿಂದ,,,, ಬಂದ ಹಾಗೆ ವಾಪಸ್ಸು ಹೊರಟು ಹೋದರು.

ಅಂದು ನಾನು ಅಪ್ಪನಿಗಾಗಿ ಬಹಳ ಹೊತ್ತು ಕಾದು ಕುಳಿತೇ. ಆದರೆ ಅಂದು ಅಪ್ಪ ಮನೆಯ ಕಡೆ ಸುಳಿಲೇ ಇಲ್ಲ.

ನಾನು ಹಾಗೇ ನಿದ್ರೆಗೆ ಜಾರಿದೆ.

ಮತ್ತೆ ಎಚ್ಚರ ವಾದಾಗ ಅದೇ ಅಮ್ಮನ ಮಾತುಗಳು ಕಿವಿಗಪ್ಪಳಿಸುತ್ತಿದ್ದವು………

“ನನ್ನ ಮಕ್ಕಳು ನನ್ನನ್ನು ಪೂರ್ತಿಯಾಗಿ ನಂಬುತ್ತಾರೆ”. “ಅವರ ಅಪ್ಪನನ್ನು ಕಂಡರೆ ಬೆಂಕಿ ಉಗುಳುತ್ತಾರೆ”. “ನನ್ನ ಮಕ್ಕಳು……” “ನಮ್ಮ ಇಷ್ಟು ವರ್ಷದ ಸಹನೆಗೆ ತಾಳ್ಮೆಗೆ ನಮಗೆ ಫಲ ಸಿಗುವ ಸಮಯ ಹತ್ತಿರವಾಗಿದೆ”…… “ಇನ್ನೂ ಹೇಗಾದರೂ ಮಾಡಿ ನನ್ನ ಮಗಳೇ ಎದುರು ನಿಂತು ನಮ್ಮ ಮದುವೆ ಮಾಡಿಸಬೇಕು ಅಂತಹ ಸಮಯ ಹತ್ತಿರವಾಗಿದೆ”…….

ಎನ್ನುವ ಮಾತುಗಳು ನನ್ನ ಕಿವಿಯಲ್ಲಿ ಕಾದ ಸೀಸ ಹಾಕಿದ ಅನುಭವ ಕೊಡುತ್ತಿದ್ದವು…..

ಇದನ್ನೆಲ್ಲಾ ಕೇಳಿದೆ ನನಗೆ…….

ನನ್ನ ಅಪ್ಪನನ್ನು ಕಳೆದುಕೊಳ್ಳುತ್ತಿದ್ದೇನೆ ಅನ್ನೋ ದುಃಖ ಉಮ್ಮಳ್ಳಿಸುತ್ತಿತ್ತು….

ಅಂದು ರಾತ್ರಿ ನಾನು ಕೋಣೆಯಿಂದ ಹೊರ ಹೋಗಲೇ ಇಲ್ಲ….

ಮರುದಿನ ಬೆಳಿಗ್ಗೆ ನಾನು ತಡವಾಗಿ ಎದ್ದಿದ್ದರಿಂದ ಆಗಾಗಲೇ ಅಪ್ಪ ಜಗಲಿಯಲ್ಲಿ ನಿತ್ಯದ ಪೇಪರ್ ಎತ್ತುಕೊಂಡು ಕುಳಿತಿದ್ದರು……..

ಅಂದು ಅವರನ್ನ ಗಮನಿಸಿದ ನನಗೆ ಕಂಡಿದ್ದು” ನನ್ನ ಅಪ್ಪ” “ಮುದ್ದಿನ ಅಪ್ಪ” ………………….. ಅವರ ಮುಖದಲ್ಲಿರುವ ಸಹನೆ ಎದ್ದು ಕಾಣುತ್ತಿತ್ತು….. ಅವರಲ್ಲಿ ನಮ್ಮೆಲ್ಲರ ಬಗ್ಗೆ ಇರುವ ಜವಾಬ್ದಾರಿ ಕಾಣುತ್ತಿತ್ತು…. ನಮ್ಮೆಲ್ಲರಿಗಾಗಿ ಇಷ್ಟು ವರ್ಷ ಯೋಧನಂತೆ ಹೋರಾಡಿದ ವ್ಯಕ್ತಿ….. ಒಂದು ದಿನವೂ ವಿಶ್ರಾಂತಿ ಇಲ್ಲದೆ ದುಡಿದ ನನ್ನ ಅಪ್ಪ…. ನಾನೆಂದೂ ಅಪ್ಪನನ್ನು ಪ್ರೀತಿಯಿಂದ ಕಂಡಿದ್ದೇ ಇಲ್ಲ…. ತಾತ್ಸಾರದಿಂದ ನೋಡಿದ ನೆನಪು ಅಷ್ಟೇ……. ಅಪ್ಪನನ್ನು ಹಿಡಿದು ಜೋತಾಡಬೇಕು ಅನಿಸಿತು………. ನನ್ನ ಪ್ರೀತಿಯನ್ನು ತೋರ್ಪಡಿಸಬೇಕೇನಿಸಿತು………

ಆದರೆ…………..

ಆ ಕಡೆ ನನ್ನ ಅಮ್ಮ ಅವರ ನಾಟಕದ ಪ್ರವೃತ್ತಿಯನ್ನು ಮುಂದುವರಿಸಿದ್ದರು…………

ಎಂದಿನಂತೆ ಕೂದಲು ಕೆದರಿಕೊಂಡು ಮುಖ ಸಪ್ಪಾಗಿಸಿಕೊಂಡು ಅಪ್ಪನಿಂದ ನನ್ನ ಮೇಲೆ ದೌರ್ಜನ್ಯವಾಗಿದೆ ಅನ್ನೋ ನಾಟಕೀಯ ವರ್ತನೆ ಮುಂದುವರೆದಿತ್ತು………

ಇದ್ಯಾವುದನ್ನು ತಿಳಿದಂತೆ ತೋರ್ಪಡಿಸದ ನಾನು ಆ ಸಮಯಕ್ಕಾಗಿ ಕಾದು ಕುಳಿತೆ…..

ಹೌದು ….

ಒಂದು ಪಣ ತೊಟ್ಟೆ.

ಮುಂದುವರೆಯುವುದು………………………..

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X