ಬೆಂಗಳೂರು, ಜುಲೈ 09: ಬೆಂಗಳೂರು ವ್ಯಾಪ್ತಿಯ ದೇವನಹಳ್ಳಿಯಲ್ಲಿನ ಹಾಲಿ ‘ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ರಾಜ್ಯ ಸರ್ಕಾರ ಎರಡನೇ ವಿಮಾನ ನಿಲ್ದಾಣ ನಿರ್ಮಿಸಲು ಯೋಜನೆ ರೂಪಿಸುತ್ತಿದೆ. ಈ ವಿಚಾರ ಭಾರೀ ಚರ್ಚೆ ನಡೆಯುತ್ತಿರುವ ಬೆನ್ನಲ್ಲೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಮತ್ತೊಂದು ಅಪ್ಡೇಟ್ ಕೊಟ್ಟಿದ್ದಾರೆ.
ಈ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದು, ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣ ಪ್ರಸ್ತಾವನೆ ಬಗ್ಗೆ ಅವರು ವಿವರಿಸಿದ್ದಾರೆ. ರಾಜ್ಯ ಕೈಗಾರಿಕೆ ಸಚಿವರ ಎಂ.ಬಿ ಪಾಟೀಲ್ ಅವರು ಈಗಾಗಲೇ ಎರಡನೇ ವಿಮಾನ ನಿಲ್ದಾಣದ ಅಗತ್ಯತೆ ಕುರಿತು ಪ್ರಸ್ತಾಪ ಮಾಡಿದ್ದಾರೆ.
ಸದ್ಯ ಎರಡನೇ ವಿಮಾನ ನಿಲ್ದಾಣ ನಿರ್ಮಿಸುವ ಕುರಿತು ತಾಂತ್ರಿಕ ವರದಿ ಬರಬೇಕಿದೆ. ಅದೆಲ್ಲ ನೋಡಿಕೊಂಡು ನಾವು 2032ರ ಹೊತ್ತಿಗೆ ಯೋಜನೆ ಸಿದ್ಧಪಡಿಸಬೇಕಿದೆ. ಏಕೆಂದರೆ ಹಾಲಿ ಏರ್‌ಪೋರ್ಟ್ ವ್ಯಾಪ್ತಿಯ ಸುಮಾರು 150 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮತ್ತೊಂದು ಏರ್‌ಪೋರ್ಟ್ ನಿರ್ಮಿಸದಂತೆ ಒಪ್ಪಂದ ಇದೆ.
ಗ್ರೇಟರ್ ಬೆಂಗಳೂರು ಪ್ಲಾನಿಂಗ್ ಅಥಾರಿಟಿ
ಈ ಒಪ್ಪಂದವರು 2032ಕ್ಕೆ ಮುಗಿಯಲಿದೆ. ಅಷ್ಟರೊಳಗೆ ಎರಡನೇ ವಿಮಾನ ನಿಲ್ದಾಣ ನಿರ್ಮಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅಧಿಕಾರಿಗಳು ಜಾಗದ ಸರ್ವೇ ಮಾಡುತ್ತಿದ್ದಾರೆ. ಎಲ್ಲಿ ನಿರ್ಮಿಸಿದರೆ ಒಳಿತು ಎಂಬ ಪ್ರಾಥಮಿಕ ಚರ್ಚೆಗಳು ನಡೆಯುತ್ತಿವೆ ಎಂದು ಅವರು ಮಾಹಿತಿ ನೀಡಿದರು.
ಏರ್‌ಪೋರ್ಟ್‌ಗಾಗಿ ವಿವಿಧೆಡೆ ಜಾಗ ಹುಡುಕಾಟ
ಸದ್ಯ ರಾಮನಗರ, ತುಮಕೂರು, ಕನಕಪುರ ಸೇರಿದಂತೆ ಬೆಂಗಳೂರಿನಿಂದ ಸುಮಾರು 40 ಕಿಲೋ ಮೀಟರ್ ಸುತ್ತಮುತ್ತ ಜಾಗದ ಹುಡುಕಾಟ ನಡೆದಿದೆ. ಇತ್ತ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಎರಡನೇ ಏರ್‌ಪೋರ್ಟ್ ನಿರ್ಮಿಸಲು ವಿಸ್ತೃತ ವರದಿ (ಡಿಪಿಆರ್) ರಚನೆ ಮಾಡುವಂತೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೆ ಒಂದು ಅಧಿಕಾರಿಗಳ ತಂಡ ಜಾಗ ಹುಡುಕಾಟದಲ್ಲಿ ನಿರತವಾಗಿದೆ. ಮತ್ತೊಂದು ಅಧಿಕಾರಿಗಳ ತಂಡ ಡಿಪಿಆರ್ ತಯಾರಿಕೆಗೆ ಇತ್ತೀಚೆಗಷ್ಟೆ ಚಾಲನೆ ನೀಡಿದೆ ಎಂದು ಕೈಗಾರಿಕೆ ಇಲಾಖೆ ಮೂಲಗಳೂ ಮಾಹಿತಿ ನೀಡಿವೆ.
ತಮಿಳುನಾಡು ವಿರುದ್ಧ ಕನ್ನಡಿಗರ ಕಿಡಿ
ಈ ಮಧ್ಯೆ ಹೊಸೂರು ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುವುದಾಗಿ ತಮಿಳುನಾಡು ರಾಜ್ಯ ಸರ್ಕಾರ ಘೋಷಣೆ ಮಾಡುವ ಮೂಲಕ ಕರ್ನಾಟಕದ ಅಭಿವೃದ್ಧಿಗೆ ಯೋಜನೆಗೆ ಬ್ರೇಕ್ ಹಾಕಲು ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮೇಕೆದಾಟು, ಕಾವೇರಿ ನೀರು ಹಂಚಿಕೆಯಲ್ಲಿ ವಿವಾದ ಎಬ್ಬಿಸುತ್ತಿದ್ದ ತಮಿಳುನಾಡು ಇದೀಗ ವಿಮಾನ ನಿಲ್ದಾಣ ವಿಚಾರದಲ್ಲಿ ಖ್ಯಾತೆ ತೆಗೆಯುತ್ತಿದೆ ಎಂದು ಹಲವರು ದೂರುತ್ತಿದ್ದಾರೆ.