ಒಬ್ಬ ವ್ಯಾಪಾರಿಯು ತಮ್ಮ ದೇಶದಲ್ಲಿ ಒಳ್ಳೆಯ ವ್ಯಾಪಾರ ಮಾಡುತ್ತಿದ್ದನು. ಅವನಿಗೆ ಹೊರದೇಶಕ್ಕೆ ಹೋಗಿ ವ್ಯಾಪಾರ ಮಾಡಿ ಒಳ್ಳೆಯ ದುಡ್ಡು ಸಂಪಾದಿಸಬೇಕೆಂಬ ಅಸೆ ಇತ್ತು.
ಈ ವಿಷಯವನ್ನು ತಮ್ಮ ತಂದೆ ತಾಯಿಗೆ ಹೇಳಿದಾಗ ಮೊದಲು ನೀನು ಮದುವೆಯಾಗು ಎಂದು ಹೇಳಿದರು. ಅವರ ಮಾತಿಗೆ ಒಪ್ಪಿ ಮದುವೆಯಾದನು. ಅವನ ಮನಸ್ಸಿನಲ್ಲಿ ಹೊರ ದೇಶಕ್ಕೆ ಹೋಗುವ ಕನಸು ಹಾಗೆ ಉಳಿದಿತ್ತು. ಒಂದು ದಿನ ತನ್ನ ಹೆಂಡತಿಯ ಬಳಿ ಈ ವಿಷಯವನ್ನು ಹೇಳಿ ಅವಳ ಒಪ್ಪಿಗೆಯನ್ನು ಪಡೆದು ಗರ್ಭವತಿಯಾದ ಹೆಂಡತಿಯನ್ನು ತಂದೆ ತಾಯಿಯ ಹತ್ತಿರ ಬಿಟ್ಟು ಹೊರದೇಶಕ್ಕೆ ವ್ಯಾಪಾರ ಮಾಡಲು ಹೊರಟುಹೋದನು.
ಹೊರದೇಶದಲ್ಲಿ ಒಳ್ಳೆಯ ವ್ಯಾಪಾರ ಮಾಡಿ ತುಂಬಾ ದುಡ್ಡನ್ನು ಗಳಿಸಿದನು.. ಮನೆಗೆ ಬೇಕಾದ ದುಡ್ಡನ್ನು ಹಾಗು ಪತ್ರಗಳನ್ನ ಕಳಿಸುವುದು ಹೀಗೆ ಹದಿನಾರು ವರುಷಗಳು ಕಳೆದವು. ನಂತರ ವ್ಯಾಪಾರಿಯು ಇನ್ನು ದುಡಿದ್ದಿದ್ದು ಸಾಕು ಊರಿಗೆ ವಾಪಾಸ್ ಹೋಗೋಣ ಎಂದು ನಿರ್ಧಾರ ಮಾಡಿ ಹಡಗಿನಲ್ಲಿ ಪ್ರಯಾಣ ಬೆಳೆಸಿದನು. ಹೀಗೆ ಹೋಗುತ್ತಿರುವಾಗ ಆ ವ್ಯಾಪಾರಿ ದುಃಖ ದಲ್ಲಿ ಕುಳಿತಿರುವ ಒಬ್ಬ ಸಹ ಪ್ರಯಾಣಿಕನನ್ನ ನೋಡಿದನು.
ಅವನನ್ನ ಮಾತನಾಡಿಸಿ ವಿಷಯವನ್ನ ಕೇಳಿದಾಗ ಅವನು ನನ್ನಲ್ಲಿರುವ ಜ್ಞಾನದ ಮಾತುಗಳನ್ನು ಕೊಡಲು ಬಂದೆ ಆದರೆ ನನ್ಹತ್ರ ಯಾರು ತೆಗೆದುಕೊಳ್ಳುವವರಿಲ್ಲ ಎಂದು ಹೇಳಿದನು. ಇದನ್ನು ಕೇಳಿದ ವ್ಯಾಪಾರಿಯು ನಾನು ತೆಗೆದು ಕೊಳ್ಳುತ್ತೇನೆ ಎಷ್ಟು ಕೊಡಬೇಕು ಎಂದು ಕೇಳಿದಾಗ ಐದು ನೂರು ಬಂಗಾರದ ನಾಣ್ಯಗಳು ಎಂದು ಹೇಳಿದನು. ತುಂಬಾ ಜಾಸ್ತಿ ಆಯಿತು ಅನಿಸಿದರೂ ವ್ಯಾಪಾರಿ ಅದಕ್ಕೆ ಒಪ್ಪಿ ನಾಣ್ಯಗಳನ್ನು ಕೊಟ್ಟನು. ಆಗ ಆ ಸಹ ಪ್ರಯಾಣಿಕನು ವ್ಯಾಪಾರಿಗೆ ಈ ಜ್ಞಾನದ ಮಾತನ್ನು ಹೇಳಿದನು. ಯಾವುದೇ ಕೆಲಸವನ್ನು ಮಾಡುವಾಗ ಜೀವನದಲ್ಲಿ ಎರಡು ನಿಮಿಷ ಯೋಚನೆ ಮಾಡು. ಕೇವಲ ಒಂದು ವಾಕ್ಯ ಐದು ನೂರು ಬಂಗಾರದ ನಾಣ್ಯಗಳ ಬದಲಾಗಿ ವ್ಯಾಪಾರಿಗೆ ಸಿಕ್ತು.
ಪ್ರಯಾಣ ಮುಗಿಯಿತು,ರಾತ್ರಿಯಾಗಿತ್ತು. ವ್ಯಾಪಾರಿ ಸಂತೋಷದಿಂದ ಅನೇಕ ವರ್ಷಗಳ ನಂತರ ತನ್ನ ಮನೆಗೆ ಬಂದು ತನ್ನ ಕೋಣೆಯಲ್ಲಿ ನೋಡುವಾಗ ತನ್ನ ಹೆಂಡತಿಯ ಪಕ್ಕದಲ್ಲಿ ಒಬ್ಬ ಹುಡುಗ ಒಬ್ಬ ಹುಡುಗ ಮಲಗಿದ್ದ. ಇದನ್ನ ನೋಡಿದ ವ್ಯಾಪಾರಿಗೆ ತುಂಬಾ ಕೋಪ ಬಂತು. ಇವರ ಕಥೆ ಮುಗಿಸುತ್ತೆನೆ ಎಂದು ಅಲ್ಲೇ ಇದ್ದ ತಲವಾರು ತೆಗೆದು ತನ್ನ ಹೆಂಡತಿಯನ್ನೇ ಕೊಲೆ ಮಾಡಲು ಹೋಗುವಾಗ ಆ ಜ್ಞಾನಿಯು ಹೇಳಿದ ಆ ಮಾತುಗಳು “ಯಾವುದೇ ಕೆಲಸ ಮಾಡುವಾಗ ಎರಡು ನಿಮಿಷ ಯೋಚನೆ ಮಾಡು” ಎಂಬುವುದು ನೆನಪಿಗೆ ಬಂತು.
ಆಗ ಆ ವ್ಯಾಪಾರಿಯು ತಲವಾರು ತೆಗೆದು ವಾಪಾಸ್ ಇಡುವಾಗ ಶಬ್ದವಾಗಿ ಹೆಂಡತಿ ನಿದ್ದೆಯಿಂದ ಎದ್ದು ಗಂಡನನ್ನು ನೋಡಿ “ಸ್ವಾಮಿ ನೀವು ಬಂದ್ರ ಇಷ್ಟು ವರ್ಷದಿಂದ ನಿಮ್ಮನ್ನು ಕಾಯುತ್ತ ಇದ್ದೆ ಎಂದು ಹೆಂಡತಿ ಗಂಡನ ಹತ್ತಿರ ಬಂದಳು. ಆದರೆ ವ್ಯಾಪಾರಿಗೆ ಕೋಪ ಕಡಿಮೆ ಅಗಲ್ಲಿಲ್ಲ. ಆ ಹುಡುಗ ಯಾರೆಂದು ತಿಳಿದುಕೊಳ್ಳಬೇಕಿತ್ತು. ಆಗ ಹೆಂಡತಿ ಆ ಹುಡುಗನನ್ನು ಕರೆದು, “ಬೇಗ ಬಂದು ನಿನ್ನ ಅಪ್ಪನ ಆಶೀರ್ವಾದ ತಗೋ ತುಂಬಾ ವರ್ಷದ ನಂತರ ವಾಪಸು ಬಂದಿದ್ದಾರೆ” ಎಂದಳು.
ಇದನ್ನು ಕೇಳಿದ ವ್ಯಾಪಾರಿಯ ಕೋಪವು ತಕ್ಷಣ ಇಳಿದು ಹೋಯಿತು. ಆ ಹುಡುಗನು ಎದ್ದು ಅಪ್ಪನ ಹತ್ತಿರ ಬರುವಾಗ ತಲೆಗೆ ಕಟ್ಟಿದ ಪೇಟ ಬಿಚ್ಚಿ ಉದ್ದ ಕೂದಲುಗಳು ಕಂಡವು. ಆಗ ಹೆಂಡತಿ ಗಂಡನಿಗೆ ಇವಳು ನಿಮ್ಮ ಮಗಳು. ತಂದೆ ಇರಲಿಲ್ಲ ಎಂಬ ಕಾರಣಕ್ಕೆ ನಾನು ಇವಳನ್ನ ಮಗನ ತರ ಪಾಲನೆ ಮಾಡಿದ್ದೇನೆ. ಒಳ್ಳೆಯ ಸಂಸ್ಕಾರಗಳನ್ನು ಕೊಟ್ಟಿದ್ದೇನೆ. ಇದನ್ನು ಕೇಳಿದ ವ್ಯಾಪಾರಿಗೆ ತುಂಬಾ ಸಂತೋಷವಾಯಿತು.ಆಗ ಅವನಿಗೆ ಆ ಜ್ಞಾನದ ಮಾತಿಗೆ ಐನೂರು ಬಂಗಾರದ ನಾಣ್ಯಗಳು ಯಾಕೆ ಎಂಬುವುದರ ಅರಿವಾಯಿತು.
Leave feedback about this