ಗಣಪತಿ ಹಬ್ಬದ ಮೆರವಣಿಗೆ ವೇಳೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಕೋಮು ಗಲಭೆ ನಡೆದಿದ್ದು, ಇಲ್ಲಿಯವರೆಗೆ ಪೊಲೀಸರು 52 ಮಂದಿಯನ್ನು ಬಂಧಿಸಿದ್ದಾರೆ. ಕೆಲ ಬೇರೆ ಕೋಮಿನ ಯುವಕರು ಗಣಪತಿ ಮೆರವಣಿಗೆ ಮೇಲೆ ಕಲ್ಲು ಹಾಗೂ ಚಪ್ಪಲಿ ಬಿಸಾಕುವುದಲ್ಲದೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿದ್ದೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಈ ನಡುವೆ ಪೊಲೀಸ್ ಠಾಣೆ ಮುಂದೆ ಮುಸ್ಲಿಂ ಸಮುದಾಯದ ಮಹಿಳೆಯರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
‘ನಮ್ಮವರು ಅಮಾಯಕರು, ಯಾವುದೇ ತಪ್ಪು ಮಾಡಿಲ್ಲ’
ಬೆಳ್ಳಂ ಬೆಳಿಗ್ಗೆ ಪೊಲೀಸ್ ಠಾಣೆಯ ಎದುರು ಜಮಾಯಿಸಿದ ಮುಸ್ಲಿಂ ಮಹಿಳೆಯರು ನಮ್ಮ ಜನರನ್ನು ಯಾಕೆ ಕರೆದುಕೊಂಡು ಬಂದಿದ್ದೀರಾ ಎಂದು ಸವಾಲು ಮಾಡಿದ್ದಾರೆ.
ನಮ್ಮವರು ಅಮಾಯಕರು, ಅವರೇನು ತಪ್ಪು ಮಾಡಿಲ್ಲ. ಯಾರು ತಪ್ಪು ಮಾಡಿದರೂ ನಮ್ಮವರನ್ನು ಎಳೆದು ತಂದು ಕೂರುಸ್ತೀರಾ, ನಮಗೆ ರಕ್ಷಣೆ ಬೇಕು ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನಗೆ ಗಂಡ, ಮಗಳು ಬಿಟ್ರೆ ಯಾರು ಇಲ್ಲ. ನಿನ್ನೆ ಕೆಲಸ ಮುಗಿಸಿ ಮನೆಗೆ ಬಂದ್ರು. ಆದ್ರೆ, ಅವರನ್ನು ಎಳೆದುಕೊಂಡು ಬಂದಿದ್ದಾರೆ, ನಮಗೆ ಭಯ ಆಗ್ತಿದೆ ನಾನೇನು ಮಾಡ್ಲಿ ಆಕ್ರೋಶ ಹೊರಹಾಕಿದ್ದಾರೆ.
ಸಣ್ಣ ಪ್ರಮಾಣದಲ್ಲಿ ಶುರುವಾದ ಗಲಾಟೆ :
ನಾಗಮಂಗಲ ಪಟ್ಟಣದಲ್ಲಿ ನಡೆದ ಕೋಮು ಗಲಭೆ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್ ನಾಗಮಂಗಲದಲ್ಲಿಇಂತಹ ಘಟನೆ ನಡೆಯಬಾರದಿತ್ತು. ಸಣ್ಣ ಪ್ರಮಾಣದಲ್ಲಿ ಶುರುವಾಗಿ ಅಂತ್ಯವಾಗಿದೆ. ಯಾರಿಗೂ ಗಾಯಗಳಾಗಲಿ, ಹೊಡೆದಾಟವಾಗಲಿ ನಡೆದಿಲ್ಲ. ಪೊಲೀಸ್ ಸಿಬ್ಬಂದಿ ಘಟನೆಯನ್ನು ಹತೋಟಿಗೆ ತಂದಿದ್ದಾರೆ. ಮೆರವಣಿಗೆ ಹೋಗುವಾಗ ಇವರು ಕಲ್ಲು ಹಾಗೂ ಚಪ್ಪಲಿಗಳನ್ನು ಬೀಸಿದ್ದಾರೆ ಅವರೂ ಅದಕ್ಕೆ ಕಲ್ಲು ಹೊಡೆದಿದ್ದಾರೆ. ಮೈಸೂರು ಐಜಿಪಿ, ಮಂಡ್ಯ ಎಸ್‌ಪಿ ಅಲ್ಲೇ ಇದ್ದು ನಾನು ಕೂಡ ಕಾನೂನು ಸುವ್ಯವಸ್ಥೆ ವಿಭಾಗ ಎಡಿಜಿಪಿ ಯವರನ್ನು ಕಳುಹಿಸಿಕೊಟ್ಟಿದ್ದೆ ಎಂದಿದ್ದಾರೆ.
‘ಅವಶ್ಯಕತೆ ಇದ್ರೆ ನಾನೂ ನಾಗಮಂಗಲಕ್ಕೆ ಭೇಟಿ ಕೊಡುತ್ತೇನೆ’
ಇನ್ನು ಈ ಘಟನೆ ಮೇಲ್ನೋಟಕ್ಕೆ ಗಮನಿಸಿದರೆ ಯಾವ ರಾಜಕೀಯ ಪ್ರಚೋದನೆ ನಡೆದದ್ದು ಎಂದು ಕಾಣ್ತಿಲ್ಲ, ಸ್ಥಳೀಯರು ಏನ್ ಅಭಿಪ್ರಾಯ ಕೊಡ್ತಾರೋ ಗೊತ್ತಿಲ್ಲ. ಸದ್ಯ ಎರಡೂ ಗುಂಪಿನ ಒಟ್ಟು 52 ಜನರನ್ನ ಬಂಧಿಸಲಾಗಿದೆ. ಅವಶ್ಯಕತೆ ಬಿದ್ರೆ ನಾನು ನಾಗಮಂಗಲಕ್ಕೆ ಭೇಟಿ ನೀಡುತ್ತೇನೆ. ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಮನವಿಯೊಂದನ್ನು ಮಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್ ಇದರಲ್ಲಿ ರಾಜಕೀಯ ತರಬೇಡಿ ಎಂದು ನಾನು ಮನವಿ ಮಾಡುತ್ತೇನೆ ಎಂದಿದ್ದಾರೆ. ಘಟನೆ ಗಂಭೀರ ಪರಿಸ್ಥಿತಿಗೆ ತಿರುಗದಂತೆ ಏನಾದರೂ ಸಲಹೆ ಇದ್ದರೆ ಕೊಡಲಿ, ಉಳಿದದ್ದು ನೋಡಲು ಪೊಲೀಸರು ಇದ್ದಾರೆ ಬಿಡಿ. ಅದನ್ನು ಬಿಟ್ಟು ರಾಜಕೀಯ ಮಾಡವುದು ಬೇಡ ಎಂದಿದ್ದಾರೆ.
ಪೊಲೀಸರಿಂದ ಸೂಕ್ತ ಕ್ರಮ: ಪರಮೇಶ್ವರ್ ಆಶಾವಾಸನೆ:
ಪೊಲೀಸರು ತಕ್ಷಣಕ್ಕೆ ತೆಗೆದುಕೊಂಡ ಕ್ರಮವನ್ನು ಉಲ್ಲೇಖಿಸಿದ ಗೃಹ ಸಚಿವರು ಪೊಲೀಸರು ಎಲ್ಲ ಭದ್ರತೆ ಯೊಂದಿಗೆ ಸಿದ್ಧವಾಗಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಒಂದು ಪ್ಲಟೋನ್ ಕೂಡ ಇತ್ತು. ಇಲ್ಲವಾದಲ್ಲಿ ಇನ್ನೂ ಹೆಚ್ಚಿನ ಗಲಾಟೆ ಸಂಭವಿಸುತ್ತಿತ್ತು. ಈಗಾಗಲೇ 52 ಜನರನ್ನು ಬಂದಿಸಿದ್ದೇವೆ. ಸಿಸಿಟಿವಿ ಕ್ಯಾಮರಾ ವೀಡಿಯೋಗಳನ್ನು ಗಮನಿಸಿ ಶಂಕಿತರನ್ನು ವಶಕ್ಕೆ ಪಡೆದಿದ್ದೇವೆ. ಮೇಲ್ನೋಟಕ್ಕೆ ಇದು ರಾಜಕೀಯ ಪ್ರೇರಿತ ಅಂತ ಕಾಣುತ್ತಿಲ್ಲ. ಹೀಗಾಗಿ ರಾಜಕೀಯ ಟೀಕೆ ಆರೋಪಗಳಿಗೆ ಈಗ ಪ್ರತಿಕ್ರಿಯೆ ಅಗತ್ಯವಿಲ್ಲ. ಈ ಹಿಂದೆ ಕುಮಾರಸ್ವಾಮಿ ಹೇಗೆ ಓಲೈಕೆ ಮಾಡ್ತಿದ್ರೋ ಗೊತ್ತಿಲ್ಲ. ಅದರ ಬಗ್ಗೆ ಈಗ ಮಾತನಾಡುವ ಅಗತ್ಯವಿಲ್ಲಾ ಎಂದಿದ್ದಾರೆ.
Leave feedback about this