ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಒಂದು ಅಜ್ಜಿಯ ವಿಡಿಯೋ ಬಗ್ಗೆ ಈ ಅಂಕಣ.
ತುಂಬಾ ವಯಸ್ಸಾದ ಬಡತನದಿಂದ ಬಳಲಿದ್ದ ಅಜ್ಜಿಯಿರಬಹುದು. ಆದರೆ ತುಂಬಾ ಸುಸಂಸ್ಕೃತರು ಅಂತೂ ನಿಜ.
ಪ್ರೇಮದ ಖನಿ. ಯಾವುದೋ ಊಟದ ಮನೆ ಅದು. ಮದುವೆಯ ಊಟವೋ ಅಥವಾ ಗೃಹ ಪ್ರವೇಶದ ಊಟವೋ ಗೊತ್ತಿಲ್ಲ. ಉದ್ದಕ್ಕೆ ಬಿಡಿಸಿದ ಟೇಬಲ್ ಒಂದರಲ್ಲಿ ಎಲ್ಲರಂತೆ ಕುಳಿತಿದ್ದರು ಈ ಅಜ್ಜಿ. ಅವರ ಎದುರಿಗೆ ಟೇಬಲ್ ಮೇಲೆ ಹರಡಿದ್ದ ಬಾಳೆ ಎಳೆಯಲ್ಲಿ ಅನ್ನ ಹಾಗು ಸಾಂಬಾರ್ ಇತ್ತು.
ಆ ಅಜ್ಜಿಯ ಆಕಡೆ ಪಕ್ಕ ಜನರು ಕೂತಿದ್ದರೂ, ಈಕಡೆ ಪಕ್ಕ ಯಾರೂ ಇರಲಿಲ್ಲ. ಈ ಅಜ್ಜಿಯ ತೊಡೆಯ ಮೇಲೆ ಅಲ್ಯೂಮಿನಿಯಂ ನ ಬುತ್ತಿಯೊಂದಿತ್ತು. ಹಳೇ ಕಾಲದ ಬುತ್ತಿಯಂತಿತ್ತು. ಏನಿಲ್ಲ ಅಂದ್ರು ಒಂದು 2 ರಿಂದ 3 ಕೆಜಿ ಅಕ್ಕಿ ತುಂಬುವಷ್ಟು ದೊಡ್ಡದು.
ಈಗ ವಿಷ್ಯ ಏನಂದ್ರೆ ಈ ಅಜ್ಜಿ ತನಗೆ ಬಡಿಸಿದ ಅನ್ನದಿಂದ ಅನ್ನದ ಕೆಲವು ಗಟ್ಟಿಗಳನ್ನು ನೀಟಾಗಿ ನಿಧಾನಕ್ಕೆ ತನ್ನ ಬುತ್ತಿಗೆ ಇಳಿಸಿ ಸ್ವಲ್ಪ ಸಾಂಬಾರು ಇದ್ದ ಅನ್ನದ ಬಾಗವನ್ನು ನೀಟಾಗಿ ಬುತ್ತಿಗೆ ಹಾಕುತ್ತಿದ್ದರು.
ಇದನ್ನೆಲ್ಲ ನಾನೆಲ್ಲಿ ನೋಡಿದೆ ಅಂತೀರಾ ? ಇಲ್ಲ ನಾನು ನೋಡಿಲ್ಲ. ಒಬ್ಬ ಪುಣ್ಯಾತ್ಮ ಇದನ್ನೆಲ್ಲಾ ರೆಕಾರ್ಡ್ ಮಾಡ್ತಾ ಅಜ್ಜಿಗೆ ಕೇಳಿಯೇ ಬಿಟ್ಟ. “ಯಾರಿಗೆ ತಗೊಂಡ್ ಹೋಗ್ತಿದ್ದೀರಾ”? ಅಜ್ಜಿ ಮುಜುಗರ ಹಾಗು ಹಿಂಜರಿಕೆಯಿಂದ “ನನ್ನ ಗಂಡನಿಗೆ ನಡೀಲಿಕ್ಕೆ ಆಗೋಲ್ಲ ಮಲ್ಗಿದಲ್ಲೇ ಇದ್ದಾರೆ”.
ಸೋಶಿಯಲ್ ಮೀಡಿಯದಲ್ಲಿ ಹರಿದಾಡೋತ್ತಿರೋ ಈ ದೃಶ್ಯ ನೋಡಿ ಖಂಡಿತ ಎಲ್ಲರಿಗೂ ಬೇಜಾರಾಗಿರುತ್ತೆ. ಎಲ್ಲರ ಕಣ್ಣಂಚಲ್ಲೂ ನೀರು ಬಂದಿರುತ್ತೆ. ಆ ವಿಡಿಯೋವನ್ನು ರೆಕಾರ್ಡ್ ಮಾಡಿದ, ಆ ಯುವಕ ಆ ಅಜ್ಜಿಗೆ ಏನಾದ್ರು ಕರೆದು ಹೆಚ್ಚಿಗೆ ಅನ್ನ ಸಾಂಬಾರು ಕೊಟ್ಟು ಕಳಿಸುವ ಮಹಾನತೆಯ ಕೆಲಸ ಮಾಡಿದನೋ ಇಲ್ಲವೋ ಗೊತ್ತಿಲ್ಲ. ಆತರ ದೃಶ್ಯವೇನೂ ಕಾಣಲಿಲ್ಲ.
ಈಗ ನನ್ನ ಪ್ರಶ್ನೆ ಇರೋದು ಆ ವಿಡಿಯೋ ರೆಕಾರ್ಡ್ ಮಾಡಿದ್ದ ಯುವಕನಲ್ಲಿ. ಆಗಿನ ಕಾಲದ ಹಿರಿಯ ಗಂಡ ಹೆಂಡತಿಯ ಅನ್ಯೋನ್ಯತೆ, ಪ್ರೀತಿ, ಪ್ರೇಮ, ಕಾಳಜಿಯನ್ನು ಪ್ರಪಂಚಕ್ಕೆ ತೋರಿಸಿದ್ದೇನೋ ಸರಿ. ಆದರೆ ಕೊನೆ ಪಕ್ಷ ಆ ಅಜ್ಜಿಯ ಮುಖವನ್ನು ಸ್ವಲ್ಪನಾದ್ರು ಬ್ಲರ್ ಮಾಡಬಹುದಿತ್ತು. ಅವರಿಗೂ ಮುಜುಗರ ವಯಕ್ತಿಕ ಮರ್ಯಾದೆ ಅಂತ ಇದ್ದೇ ಇದೆಯಲ್ವೇ ?
ಒಂದು ವೇಳೆ ಆ ಅಜ್ಜಿಯ ಜಾಗದಲ್ಲಿ ನಿಮ್ಮವರೇ ಯಾರಾದ್ರೂ ಇದ್ದು ನಿಮ್ಮವರ ವಿಡಿಯೋ ನ ಈ ತರ ರೆಕಾರ್ಡ್ ಮಾಡಿ ಹಾಕ್ಲಿಕ್ಕೆ ನೀವು ಅನುಮತಿ ಕೊಡುವವರಾಗಿದ್ದೀರಾ?